ಡೈಲಿವಾರ್ತೆ: 11/ಮೇ/2026

ಉಪ್ಪಿನಂಗಡಿ: ಬೈಕ್​ಗೆ ಕಾರು ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು, ಸಹಸವಾರೆ ಗಂಭೀರ ಗಾಯ

ಉಪ್ಪಿನಂಗಡಿ: ಕಾರು – ಬೈಕ್ ನಡುವೆ ಸಂಭವಿಸಿದಭೀಕರ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸಾವರೆಗೆ ಗಂಭೀರವಾಗಿ ಗಾಯಗೊಂಡ ಘಟನೆ ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ನಡೆದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ನಿವಾಸಿ ಹಾಗೂ ಅರಸಿನಮಕ್ಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿ ಸದಾನಂದ ಆಚಾರ್ಯ (59) ಎಂದು ಗುರುತಿಸಲಾಗಿದೆ.

ಬೈಕ್‌ನಲ್ಲಿ ಜೊತೆಯಲ್ಲಿದ್ದ ಅವರ ಪತ್ನಿ ಉಷಾ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದಾನಂದ ಆಚಾರ್ಯ ಅವರು ಅರಸಿನಮಕ್ಕಿಯಿಂದ ಉಪ್ಪಿನಂಗಡಿಗೆ ಕೊಕ್ಕಡ ಮಾರ್ಗವಾಗಿ ಬೈಕ್‌ನಲ್ಲಿ ಬರುತ್ತಿದ್ದರು. ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ವೇಳೆ, ಉಪ್ಪಿನಂಗಡಿಯಿಂದ ಶಿರಾಡಿ ಕಡೆಗೆ ತೆರಳುತ್ತಿದ್ದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಸದಾನಂದ ಆಚಾರ್ಯ ಅವರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.