ಬರೇಲಿಯಲ್ಲಿ ಬಿರುಗಾಳಿಯ ಅಟ್ಟಹಾಸ: ಶೀಟ್‌ನೊಂದಿಗೆ 50 ಅಡಿ ಎತ್ತರಕ್ಕೆ ಹಾರಿದ ವ್ಯಕ್ತಿ, ಗಂಭೀರ ಗಾಯ (ವಿಡಿಯೋ ವೈರಲ್)

ಲಕ್ನೋ: ಬಿರುಗಾಳಿಯ ರಭಸಕ್ಕೆ ಶೆಡ್‌ ಒಂದರ ತಗಡಿನ ಶೀಟ್‌ಗಳು ಹಾರಿ ಹೋಗಿದ್ದು, ಅದರ ಜೊತೆಗೆ ವ್ಯಕ್ತಿಯೊಬ್ಬ ಸುಮಾರು 50 ಅಡಿ ಎತ್ತರಕ್ಕೆ ಹಾರಿ ನೆಲಕ್ಕೆ ಅಪ್ಪಳಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯ ಬಾಮಿಯಾನಾ ಗ್ರಾಮದಲ್ಲಿ ನಡೆದಿದೆ.

ವ್ಯಕ್ತಿ ಗಾಳಿಯಲ್ಲಿ ಹಾರುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ಗಾಳಿಯಲ್ಲಿ ಹಾರಿ ಬಿದ್ದ ವ್ಯಕ್ತಿಯನ್ನು ನಾನ್ಹೆ ಮಿಯಾನ್ ಎಂದು ಗುರುತಿಸಲಾಗಿದೆ. ಅವರ ಕೈಗಳು ಮತ್ತು ಕಾಲುಗಳ ಮೂಳೆ ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿರುಗಾಳಿಯ ಸಮಯದಲ್ಲಿ ಅವರು ತಗಡಿಗೆ ಕಟ್ಟಿದ್ದ ಹಗ್ಗವನ್ನು ಹಿಡಿದು ಹೊಂಡಿದ್ದರು. ಗಾಳಿಯ ರಭಸಕ್ಕೆ ತಗಡು ಹಾರಿದಾಗ ಅದರ ಜೊತೆಯಲ್ಲೇ ಅವರು ಗಾಳಿಯಲ್ಲಿ ಮೇಲೆ ಹಾರಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ನಾನ್ಹೆ ಮಿಯಾನ್, ಗಾಳಿ ಬೀಸುವಾಗ ಸುರಕ್ಷಿತವಾಗಿರುತ್ತೇನೆ ಎಂದು ಹಗ್ಗ ಹಿಡಿದಿದ್ದೆ. ಆದರೆ ಗಾಳಿಯ ರಭಸಕ್ಕೆ ತಗಡಿನ ಶೀಟ್‌ಗಳು ಹಾರಿ ಹೋದವು. ಅದರ ಜೊತೆ ನಾನು ಸಹ ಹಾರಿ ಹೋದೆ. ನಾನು ಎಲ್ಲಿ ಬಿದ್ದೆನೆಂದು ನನಗೆ ತಿಳಿಯಲಿಲ್ಲ. ಸುಮಾರು 50 ಅಡಿ ಎತ್ತರಕ್ಕೆ ಹಾರಿ, ದೂರದಲ್ಲಿ ಬಿದ್ದಿದ್ದೆ ಎಂದು ಹೇಳಿಕೊಂಡಿದ್ದಾರೆ. ಅಧಿಕಾರಿಗಳು ನಾನ್ಹೆ ಅವರೊಂದಿಗೆ ಮಾತನಾಡಿ, ಅಗತ್ಯ ಸಹಾಯ ನೀಡುವ ಭರವಸೆ ನೀಡಿದ್ದಾರೆ.

ಉತ್ತರಪ್ರದೇಶದಲ್ಲಿ ಹವಾಮಾನ ಹವಾಮಾನ ವೈಪರಿತ್ಯದಿಂದ ಗುಡುಗು ಸಹಿತ ಬಿರುಗಾಳಿ ಮಳೆಯಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲಾ ಜಿಲ್ಲೆಗಳು ಪ್ರತಿ ಮೂರು ಗಂಟೆಗಳಿಗೊಮ್ಮೆ ಚಂಡಮಾರುತ, ಮಳೆ ಮತ್ತು ಸಿಡಿಲಿನಿಂದ ಉಂಟಾದ ಹಾನಿಯ ಕುರಿತು ಮಾಹಿತಿ ಕಳುಹಿಸುವಂತೆ ನಿರ್ದೇಶಿಸಿದ್ದಾರೆ. ಪರಿಹಾರ ವಿತರಣೆ ಸೇರಿದಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬುಧವಾರ ಉತ್ತರಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಕನಿಷ್ಠ 104 ಜನರು ಸಾವನ್ನಪ್ಪಿದ್ದು, 53 ಜನರು ಗಾಯಗೊಂಡಿದ್ದಾರೆ. 87 ಮನೆಗಳಿಗೆ ಹಾನಿಯಾಗಿದೆ. 114 ಜಾನುವಾರುಗಳು ಸಹ ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಪ್ರಯಾಗ್‌ರಾಜ್, ಭದೋಹಿ, ಫತೇಪುರ್ ಮತ್ತು ಸೋನ್‌ಭದ್ರ ಸೇರಿದಂತೆ ಜಿಲ್ಲೆಗಳಿಂದ ಭಾರಿ ನಾಶನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.