



ಡೈಲಿವಾರ್ತೆ: 14/ಮೇ/2026

ಕೋಟ: ಕುಟುಂಬ ಕಲಹಕ್ಕೆ ಬಲಿಯಾದ ಕೂಲಿ ಕಾರ್ಮಿಕ – ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕೋಟ: ಪತ್ನಿಯೊಂದಿಗೆ ನಡೆದ ಜಗಳ ಹಾಗೂ ಆಕೆ ಮನೆಯಿಂದ ದೂರ ಹೋದ ಹಿನ್ನೆಲೆಯಲ್ಲಿ ಮನನೊಂದ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಎಂಬಲ್ಲಿ ನಡೆದಿದೆ.
ಬಾಳಕುದ್ರು ಹಂಗಾರಕಟ್ಟೆಯ ರಕ್ತೇಶ್ವರಿ ದೇವಸ್ಥಾನದ ಸಮೀಪ ವಾಸವಾಗಿದ್ದ ದಾಮೋದರ (46) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಕೂಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ಘಟನೆಯ ಹಿನ್ನೆಲೆ:
ಮೃತ ದಾಮೋದರ ಅವರು ಸದಾ ಕುಡಿತದ ಅಮಲಿನಲ್ಲಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ಪತ್ನಿ ಶೋಭಾ ಅವರೊಂದಿಗೆ ಜಗಳವಾಡಿದ್ದ ದಾಮೋದರ, ಆಕೆಗೆ ಹಲ್ಲೆ ನಡೆಸಿ ಮೊಬೈಲ್ ಫೋನ್ ಪುಡಿಮಾಡಿದ್ದರು. ಇದರಿಂದ ಬೇಸತ್ತ ಪತ್ನಿ ಶೋಭಾ ತನ್ನ ಮಗನೊಂದಿಗೆ ಮನೆಯಿಂದ ತೆರಳಿದ್ದರು. ಪತ್ನಿ ಮತ್ತು ಮಗ ಮನೆಗೆ ಮರಳದ ಕಾರಣ ತೀವ್ರವಾಗಿ ಮನನೊಂದಿದ್ದ ದಾಮೋದರ, ಬುಧವಾರದಂದು (ಮೇ 13) ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೇ 13ರ ಬೆಳಿಗ್ಗೆ 10:30 ರಿಂದ ಸಂಜೆ 4:00 ಗಂಟೆಯ ಮಧ್ಯಾವಧಿಯಲ್ಲಿ ದಾಮೋದರ ಅವರು ನೆರೆಮನೆಯ ಶಶಿಧರ ಎಂಬುವವರ ಬಾವಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಹಾರಿದ್ದಾರೆ. ಅವರ ದೇಹದ ಅರ್ಧಭಾಗ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರ ಅಕ್ಕನಾದ ಜ್ಯೋತಿ (48) ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪತ್ನಿಯು ಮನೆಗೆ ಬಾರದೇ ಇರುವುದಕ್ಕೆ ದಾಮೋದರ ಅತಿಯಾಗಿ ಮದ್ಯ ಸೇವಿಸಿ, ಅದೇ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ (UDR) ಕ್ರಮಾಂಕ 19/2026, ಕಲಂ 194 BNSS ರಂತೆ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.