ಡೈಲಿವಾರ್ತೆ: 15/ಮೇ/2026

ಸ್ಕೂಟಿಗೆ ಟ್ರ್ಯಾಕ್ಟರ್ ಡಿಕ್ಕಿ:ಜನಗಣತಿ ಕರ್ತವ್ಯಕ್ಕೆ ತೆರಳುತ್ತಿದ್ದ ಶಿಕ್ಷಕಿ ದುರ್ಮರಣ

ಸಿದ್ದಾಪುರ: ಸಿದ್ದಾಪುರ – ಶಿರಸಿ ಮುಖ್ಯ ರಸ್ತೆಯ ಮಳವತ್ತಿ ಸಮೀಪ ಟ್ರ್ಯಾಕ್ಟರ್ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿಕ್ಷಕಿಯೊಬ್ಬರು ಮೃತಪಟ್ಟ ದಾರುಣ ಘಟನೆ ಗುರುವಾರ ನಡೆದಿದೆ.

ಮೃತರನ್ನು ಪಟ್ಟಣದ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪೂರ್ಣಿಮಾ ಗಣಪತಿ ಭಟ್ಟ (47) ಎಂದು ಗುರುತಿಸಲಾಗಿದೆ. ಜನಗಣತಿ ಮಾಹಿತಿಯನ್ನು ಪಟ್ಟಣ ಪಂಚಾಯಿತಿಗೆ ಸಲ್ಲಿಸಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪೂರ್ಣಿಮಾ ಅವರನ್ನು ತಕ್ಷಣವೇ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ಣಿಮಾ ಭಟ್ಟ ಅವರು ಪಟ್ಟಣದ ಕೋಲಸಿರ್ಸಿ ಕ್ರಾಸ್ ಸಮೀಪದ ಬಸವಗಿರಿ ನಿವಾಸಿಯಾಗಿದ್ದು, ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.