



ಡೈಲಿವಾರ್ತೆ: 16/ಮೇ/2026

ಬಂಟ್ವಾಳದಲ್ಲಿ ಸಿಡಿಲ ಅಬ್ಬರಕ್ಕೆ ನಡುಗಿದ ದೇವಸ್ಥಾನಗಳು: ಇಳಿಯೂರು, ಕಾರಿಂಜೇಶ್ವರ ದೇವಳಕ್ಕೆ ಭಾರಿ ಹಾನಿ

ಪುಂಜಾಲಕಟ್ಟೆ, ಮೇ 16: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಾದ್ಯಂತ ಶನಿವಾರ ಸಂಜೆ ಸುರಿದ ಸಿಡಿಲು ಸಹಿತ ಭಾರಿ ಮಳೆಗೆ ಎರಡು ಪ್ರತ್ಯೇಕ ಪ್ರಸಿದ್ಧ ದೇವಸ್ಥಾನಗಳು ಸಿಡಿಲಾಘಾತಕ್ಕೆ ಒಳಗಾಗಿ, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಪ್ರಕೃತಿಯ ಈ ವಿಕೋಪದಿಂದಾಗಿ ಇಳಿಯೂರು ಮತ್ತು ಕಾರಿಂಜದ ಪುಣ್ಯಕ್ಷೇತ್ರಗಳ ಗೋಪುರ ಹಾಗೂ ಪ್ರಾಕಾರಗಳು ಧ್ವಂಸಗೊಂಡಿದ್ದು, ಭಕ್ತಾದಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಘಟನೆ 1: ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಸಿಡಿಲಾಘಾತ – ಕೋಟ್ಯಂತರ ರೂ. ನಷ್ಟ

ಮಣಿನಾಲ್ಕೂರು: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಗರ್ಭಗುಡಿಯ ಪ್ರಾಕಾರಕ್ಕೆ ಶನಿವಾರ ಸಂಜೆ ಸುಮಾರು 4:30ರ ವೇಳೆಗೆ ಪ್ರಬಲ ಸಿಡಿಲು ಬಡಿದಿದೆ. ಸಿಡಿಲಿನ ಭೀಕರ ಹೊಡೆತಕ್ಕೆ ಗರ್ಭಗುಡಿಯ ಮೇಲಿನ ಪ್ರಾಕಾರದ ಶಿಲಾ ಕಲ್ಲುಗಳು ಛಿದ್ರ ಛಿದ್ರಗೊಂಡು ನೆಲಕ್ಕಪ್ಪಳಿಸಿವೆ.

ಅಪಾರ ಪ್ರಮಾಣದ ಹಾನಿ: ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೇ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ಕಂಡಿದ್ದ ಈ ದೇವಸ್ಥಾನದ ಗರ್ಭಗುಡಿಗೂ ತೀವ್ರ ಹಾನಿಯಾಗಿದ್ದು, ಸುಮಾರು 1 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸಿಡಿಲು ಬಡಿದ ಹಿನ್ನೆಲೆಯಲ್ಲಿ ದೇವಸ್ಥಾನದ ಗರ್ಭಗುಡಿಯನ್ನು ಮತ್ತೆ ನವೀಕರಣಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಘಟನೆಯ ಸಂದರ್ಭದಲ್ಲಿ ದೇವಳದ ಅರ್ಚಕರು ಹೊರಭಾಗದಲ್ಲಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ದೇವಳದ ಆಡಳಿತ ಟ್ರಸ್ಟಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಸ್ಥಳೀಯ ಭಕ್ತರು ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ್ದು, ಈ ಬಗ್ಗೆ ಕಂದಾಯ ಇಲಾಖೆಗೆ ತುರ್ತು ಮಾಹಿತಿ ನೀಡಲಾಗಿದೆ.
ಘಟನೆ 2: ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿತ

ಕಾವಳಮೂಡೂರು: ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಬೃಹತ್ ಬೆಟ್ಟದ ಮೇಲಿರುವ ಇತಿಹಾಸ ಪ್ರಸಿದ್ಧ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಶನಿವಾರ ಸಂಜೆ 5 ಗಂಟೆಯ ಸುಮಾರಿಗೆ ಸಿಡಿಲು ಬಡಿದಿದೆ.
ಸಿಡಿಲಿನ ತೀವ್ರತೆಗೆ ದೇವಸ್ಥಾನದ ಗರ್ಭಗುಡಿಯ ಮೇಲಿನ ಸುಂದರ ಗೋಪುರಕ್ಕೆ ಭಾರಿ ಹಾನಿಯಾಗಿದೆ.ಅದೃಷ್ಟವಶಾತ್ ಸಿಡಿಲು ಬಡಿದ ಆ ಸಮಯದಲ್ಲಿ ದೇವಸ್ಥಾನದ ಆ ಭಾಗದಲ್ಲಿ ಯಾರೂ ಇಲ್ಲದಿದ್ದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ.ಘಟನೆಗೆ ಸಂಬಂಧಿಸಿದಂತೆ ನಷ್ಟದ ನಿಖರ ಮೌಲ್ಯವನ್ನು ಇನ್ನಷ್ಟೇ ಅಂದಾಜಿಸಬೇಕಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವೀರೇಂದ್ರ ಬಿ. ಅಮೀನ್ ತಿಳಿಸಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಮಾಹಿತಿ ನೀಡಲಾಗಿದೆ.