



ಡೈಲಿವಾರ್ತೆ: 17/ಮೇ/2026

ಮಂಗಳೂರು: ಕುಂಟಿಕಾನದಲ್ಲಿ ಭೀಕರ ಲಿಫ್ಟ್ ದುರಂತ – ಡೆಲಿವರಿ ಸಂಸ್ಥೆಯ ಸಿಬ್ಬಂದಿ ದಾರುಣ ಸಾವು

ಮಂಗಳೂರು: ನಗರದ ಕುಂಟಿಕಾನ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಆನ್‌ಲೈನ್ ಡೆಲಿವರಿ ಸಂಸ್ಥೆಯ ಕಟ್ಟಡದಲ್ಲಿ ಸಂಭವಿಸಿದ ಭೀಕರ ಲಿಫ್ಟ್ ದುರಂತದಲ್ಲಿ ಯುವ ಉದ್ಯೋಗಿಯೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್ (28) ಎಂದು ಗುರುತಿಸಲಾಗಿದೆ.
ಅವರು ಆನ್‌ಲೈನ್ ಡೆಲಿವರಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕರ್ತವ್ಯದ ನಿಮಿತ್ತ ಕಟ್ಟಡದ ಮೇಲ್ಮಹಡಿಗೆ ತೆರಳುತ್ತಿದ್ದ ವೇಳೆ ಈ ದಾರುಣ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.ಮಾಹಿತಿಯ ಪ್ರಕಾರ, ನೌಫಾಲ್ ಲಿಫ್ಟ್ ಮೂಲಕ ಮೇಲ್ಮಹಡಿಗೆ ತೆರಳುತ್ತಿದ್ದಾಗ ಏಕಾಏಕಿ ಲಿಫ್ಟ್ ತಾಂತ್ರಿಕ ದೋಷದಿಂದ ನೆಲಮಹಡಿ ಮತ್ತು ಮೊದಲ ಮಹಡಿ ನಡುವಿನ ಭಾಗದಲ್ಲಿ ಸ್ಥಗಿತಗೊಂಡಿದೆ. ಲಿಫ್ಟ್ ಒಳಗೆ ಸಿಲುಕಿಕೊಂಡ ನೌಫಾಲ್ ಸಹಾಯಕ್ಕಾಗಿ ಕೂಗಿಕೊಂಡಿದ್ದು, ತಕ್ಷಣ ಸ್ಥಳದಲ್ಲಿದ್ದ ಸಿಬ್ಬಂದಿ ಹಾಗೂ ಸಹೋದ್ಯೋಗಿಗಳು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.ಲಿಫ್ಟ್‌ನ ಒಂದು ಭಾಗ ಮೊದಲ ಮಹಡಿಗೆ ಸಮೀಪದಲ್ಲಿದ್ದ ಹಿನ್ನೆಲೆಯಲ್ಲಿ, ಸಿಬ್ಬಂದಿ ಬಲವಂತವಾಗಿ ಬಾಗಿಲು ತೆರೆಯಲು ಪ್ರಯತ್ನಿಸಿ, ಒಳಗಿದ್ದ ನೌಫಾಲ್ ಅವರನ್ನು ಮೇಲಕ್ಕೆ ಎಳೆಯಲು ಮುಂದಾಗಿದ್ದರು. ಆದರೆ ಇದೇ ವೇಳೆ ಲಿಫ್ಟ್ ಏಕಾಏಕಿ ಮರುಚಲನೆಗೊಂಡ ಪರಿಣಾಮ, ನೌಫಾಲ್ ಗಂಭೀರವಾಗಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯುವ ಉದ್ಯೋಗಿಯ ಅಕಾಲಿಕ ಸಾವಿನಿಂದ ಕುಟುಂಬಸ್ಥರು, ಬಂಧುಗಳು ಹಾಗೂ ಸಹೋದ್ಯೋಗಿಗಳಲ್ಲಿ ಶೋಕ ಆವರಿಸಿದೆ.
ಘಟನಾ ಸ್ಥಳಕ್ಕೆ ಉರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಿಫ್ಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದೇ ಅಥವಾ ಸುರಕ್ಷತಾ ಕ್ರಮಗಳಲ್ಲಿ ನಿರ್ಲಕ್ಷ್ಯ ವಹಿಸಲಾಗಿತ್ತೇ ಎಂಬ ಕುರಿತು ತನಿಖೆ ಆರಂಭಿಸಲಾಗಿದೆ.