



ಡೈಲಿವಾರ್ತೆ: 17/ಮೇ/2026

ಮಂಗಳೂರು: ಅಕ್ರಮ ಜಾನುವಾರು ಸಾಗಾಟ ಜಾಲ ಪತ್ತೆ – 27 ಕೋಣಗಳ ರಕ್ಷಣೆ, ನಾಲ್ವರ ಬಂಧನ

ಮಂಗಳೂರು: ಯಾವುದೇ ಅಧಿಕೃತ ದಾಖಲೆ ಪತ್ರಗಳಿಲ್ಲದೆ ಕೇರಳಕ್ಕೆ ಭೀಕರ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿದ್ದ ಬರೋಬ್ಬರಿ 27 ಕೋಣಗಳನ್ನು ರಕ್ಷಿಸುವಲ್ಲಿ ಕಂಕನಾಡಿ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಬೃಹತ್ ಜಾನುವಾರು ಅಕ್ರಮ ಸಾಗಾಟ ಜಾಲವನ್ನು ಭೇದಿಸಿರುವ ಪೊಲೀಸರು, ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ, ಸಾಗಾಟಕ್ಕೆ ಬಳಸಿದ್ದ ಈಚರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಮೇ 16ರಂದು ಬೆಳಗ್ಗಿನ ಜಾವ 6:00 ಗಂಟೆಯ ಸುಮಾರಿಗೆ ಕಂಕನಾಡಿ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಡಿ. ನಾಗರಾಜ್ ಅವರ ನೇತೃತ್ವದ ಪೊಲೀಸ್ ತಂಡವು ಖಚಿತ ಮಾಹಿತಿ ಮೇರೆಗೆ ಜಪ್ಪಿನಮೊಗರು ಸಮೀಪ ಜಂಟಿ ಕಾರ್ಯಾಚರಣೆ ಕೈಗೊಂಡಿತ್ತು. ಕರ್ನಾಟಕ ರಾಜ್ಯದಿಂದ ಮಂಗಳೂರು ಮಾರ್ಗವಾಗಿ ಕೇರಳ ರಾಜ್ಯದ ತಲಿಪರಂಬು ಎಂಬಲ್ಲಿಗೆ ಚಲಿಸುತ್ತಿದ್ದ ಈಚರ್ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ, ಅತ್ಯಂತ ಕ್ರೂರ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಕೋಣಗಳನ್ನು ಕೂಡಿ ಹಾಕಿರುವುದು ಬೆಳಕಿಗೆ ಬಂದಿದೆ. ಯಾವುದೇ ಪಶುವೈದ್ಯಕೀಯ ಪ್ರಮಾಣಪತ್ರವಾಗಲಿ ಅಥವಾ ಕಾನೂನುಬದ್ಧ ದಾಖಲೆಗಳಾಗಲಿ ವಾಹನದಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಅರುಣ ಚಂದ್ರಪ್ಪ ಜಾವಳಿ (ಹಿರೇಕೆರೂರು, ಹಾವೇರಿ), ಹಿರಿಯಣ್ಣ ಗೌಡ (ಅರಸಿಕೆರೆ, ಹಾಸನ), ಸುನೀಲ್ ಲಕ್ಷ್ಮಪ್ಪ ಜಾವಳ್ಳಿ (ಹಿರೇಕೆರೂರು, ಹಾವೇರಿ) ಹಾಗೂ ಸಯ್ಯದ್ ಮೆಹಬೂಬ್ ಅಲಿ (ಬೊಮ್ಮನಕಟ್ಟೆ, ಶಿವಮೊಗ್ಗ) ಎಂದು ಗುರುತಿಸಲಾಗಿದೆ.
ಪೊಲೀಸರು ಆರೋಪಿಗಳ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂ: 59/2026ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಹಾಗೂ ಪ್ರಾಣಿ ಹಿಂಸಾ ತಡೆ ಕಾಯ್ದೆಯಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.