




ಡೈಲಿವಾರ್ತೆ: 26/ಮೇ/2026


ಉಡುಪಿ: ಟಯರ್ ಸ್ಫೋಟಗೊಂಡು ಚಲಿಸುತ್ತಿದ್ದ ಮೀನು ಸಾಗಾಟದ ಲಾರಿ ಪಲ್ಟಿ – ತಪ್ಪಿದ ಭಾರಿ ಅನಾಹುತ

ಉಡುಪಿ: ರಾಷ್ಟ್ರೀಯ ಹೆದ್ದಾರಿಯ ಅಂಬಾಗಿಲು ಜಂಕ್ಷನ್ ಸಮೀಪ ಮಂಗಳವಾರ ಭೀಕರ ಅಪಘಾತವೊಂದು ಸಂಭವಿಸಿದೆ. ಉಡುಪಿಯಿಂದ ಕುಂದಾಪುರ ಕಡೆಗೆ ಅತೀ ವೇಗವಾಗಿ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದರ ಟಯರ್ ಚಲಿಸುತ್ತಿರುವಾಗಲೇ ಹಠಾತ್ತಾಗಿ ಸ್ಫೋಟಗೊಂಡ ಪರಿಣಾಮ, ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ. ಲಾರಿ ಚಾಲಕ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಟಯರ್ ಸ್ಫೋಟದ ತೀವ್ರತೆಗೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಲಾರಿಯಲ್ಲಿದ್ದ ನೂರಾರು ಮೀನಿನ ಪೆಟ್ಟಿಗೆಗಳು ರಸ್ತೆಯುದ್ದಕ್ಕೂ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ರಸ್ತೆ ಪಾಲಾಗಿವೆ. ಜನನಿಬಿಡ ಹೆದ್ದಾರಿಯಲ್ಲೇ ಈ ಅಪಘಾತ ಸಂಭವಿಸಿದ್ದರಿಂದ, ಕೆಲಕಾಲ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಅಪಘಾತದ ಭೀಕರ ಶಬ್ದ ಕೇಳಿ ಸ್ಥಳೀಯ ನಿವಾಸಿಗಳು ಹಾಗೂ ಹಾದಿಹೋಕ ವಾಹನ ಸವಾರರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಲಾರಿಯೊಳಗೆ ಸಿಲುಕಿದ್ದ ಚಾಲಕನನ್ನು ಹೊರಗೆಳೆಯುವ ಮೂಲಕ ತಕ್ಷಣದ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಉಡುಪಿ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ತಕ್ಷಣವೇ ರಸ್ತೆಯಲ್ಲಿದ್ದ ಮೀನಿನ ಪೆಟ್ಟಿಗೆಗಳನ್ನು ಹಾಗೂ ಪಲ್ಟಿಯಾಗಿದ್ದ ಲಾರಿಯನ್ನು ಕ್ರೇನ್ ಸಹಾಯದಿಂದ ಪಕ್ಕಕ್ಕೆ ಸರಿಸಿ, ಸುಗಮ ವಾಹನ ಸಂಚಾರಕ್ಕೆ ಹಾದಿ ಮಾಡಿಕೊಟ್ಟರು.