ಡೈಲಿವಾರ್ತೆ: 26/ಮೇ/2026

ಉದ್ಯೋಗಾಧಾರಿತ ಶಿಕ್ಷಣದ ಮೂಲಕ ಹುಟ್ಟೂರಿಗೆ ಕೊಡುಗೆ: ಡಾ. ಎಂ. ಮೋಹನ್ ಆಳ್ವ – ಯಡಾಡಿ-ಮತ್ಯಾಡಿಯಲ್ಲಿ ‘ಎಸ್‌ಕೆಎಫ್‌ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್‌’ ಲೋಕಾರ್ಪಣೆ

​ಕುಂದಾಪುರ: ಸತತ ಹೋರಾಟ, ಪರಿಶ್ರಮ ಮತ್ತು ಸೃಜನಶೀಲತೆಯ ಮೂಲಕ ಜೀವನದಲ್ಲಿ ಎತ್ತರಕ್ಕೇರಿದ ವ್ಯಕ್ತಿ ಡಾ. ಜಿ. ರಾಮಕೃಷ್ಣ ಆಚಾರ್ ಅವರು ಒಂದು ಸಾವಿರ ರೂ. ಬಾಡಿಗೆಯ ಕಟ್ಟಡದಲ್ಲಿ ಆರಂಭವಾದ ಸಣ್ಣ ಉದ್ಯಮ ಇಂದು 400 ಕೋಟಿ ರೂ. ವ್ಯವಹಾರ ಮಾಡುವ ಮಟ್ಟಕ್ಕೆ ಬೆಳೆದು, 21ಕ್ಕೂ ಹೆಚ್ಚು ವಿದೇಶಗಳಿಗೆ ವಿಸ್ತರಿಸಿರುವುದು ಯುವಜನತೆಗೆ ಮಾದರಿಯಾಗಿದೆ ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.

ಯಡಾಡಿ-ಮತ್ಯಾಡಿಯ ಗುಡ್ಡೆಅಂಗಡಿಯಲ್ಲಿ ನೂತನವಾಗಿ ಆರಂಭಿಸಲಾದ ಎಸ್‌ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್‌ನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿ ನಾನು ಮತ್ತು ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಚೇರ್ಮನ್ ಡಾ. ಜಿ. ರಾಮಕೃಷ್ಣ ಆಚಾರ್ ಇಬ್ಬರೂ ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ ಮೇಲೆ ಬಂದವರು. ಇಂದು ಅವರು ದೇಶ-ವಿದೇಶಗಳಲ್ಲಿ ಸಾವಿರಾರು ಮಂದಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ. ಈಗ ಹುಟ್ಟೂರಿನ ಯುವಕರಿಗೆ ಕೌಶಲ್ಯಾಧಾರಿತ ಶಿಕ್ಷಣ ನೀಡಿ, ತಮ್ಮದೇ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸಲು ಮುಂದಾಗಿರುವುದು ಸಮಾಜಮುಖಿ ಚಿಂತನೆಯ ಪ್ರತೀಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಚಿತ ತರಬೇತಿ ಮತ್ತು ಉದ್ಯೋಗದ ಭರವಸೆ: ​ಡಾ. ಜಿ. ರಾಮಕೃಷ್ಣ ಆಚಾರ್

ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಡಾ. ಜಿ. ರಾಮಕೃಷ್ಣ ಆಚಾರ್ ನಮ್ಮ ವ್ಯವಹಾರ ದೇಶ-ವಿದೇಶಗಳಲ್ಲಿ ವಿಸ್ತರಿಸಿಕೊಂಡಿದ್ದರೂ, ಹುಟ್ಟೂರಿನ ಯುವಕರ ಬದುಕಿಗೆ ದಾರಿ ಮಾಡಿಕೊಡಬೇಕೆಂಬ ಆಶಯದಿಂದ ಈ ತರಬೇತಿ ಕೇಂದ್ರವನ್ನು ಆರಂಭಿಸಿದ್ದೇವೆ. ಈಗಾಗಲೇ ನಮ್ಮ ಸಂಸ್ಥೆಗಳಲ್ಲಿ ಸುಮಾರು ಮೂರು ಸಾವಿರ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ ನುರಿತ ತಾಂತ್ರಿಕ ಸಿಬ್ಬಂದಿಗಳ ಬೇಡಿಕೆ ಹೆಚ್ಚಾಗಿದೆ ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೂ ಇಲ್ಲಿ ವಿಶೇಷ ತರಬೇತಿ ನೀಡಿ, ಆಧುನಿಕ ತಂತ್ರಜ್ಞಾನದ ಮೂಲಕ ಸಂಪೂರ್ಣ ಉಚಿತ ಶಿಕ್ಷಣ ಒದಗಿಸಲಾಗುವುದು. ತರಬೇತಿ ಬಳಿಕ ತಿಂಗಳಿಗೆ 40 ಸಾವಿರದಿಂದ 3 ಲಕ್ಷ ರೂ.ವರೆಗೆ ಸಂಬಳ ದೊರೆಯುವ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

​ವಿವಿಧ ವಿಭಾಗಗಳ ಉದ್ಘಾಟನೆ:
​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಕಚೇರಿಯನ್ನು ಉದ್ಘಾಟಿಸಿದರು.
​ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗವನ್ನು ಉದ್ಯಮಿ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ.
​ಕಂಪ್ಯೂಟರ್ ವಿಭಾಗವನ್ನು ಕಾರ್ಕಳ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಚೇರ್ಮನ್ ಡಾ. ಸುಧಾಕರ್ ಶೆಟ್ಟಿ.
​ಫ್ಯಾಶನ್ ಡಿಸೈನಿಂಗ್ ವಿಭಾಗವನ್ನು ಮಂಗಳೂರಿನ ಲೆಕ್ಕ ಪರಿಶೋಧಕ ಸಿಎ ಎಸ್. ಎಸ್. ನಾಯಕ್.
​ತರಗತಿ ಕೊಠಡಿಗಳನ್ನು ಮೊಳಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ.
​ಎಂಆರ್ ಎಸಿ ಮತ್ತು ಪ್ಲಂಬಿಂಗ್ ವಿಭಾಗವನ್ನು ಪ್ರಥಮ ದರ್ಜೆ ಗುತ್ತಿಗೆದಾರ ಬಿ. ಅರುಣ್ ಕುಮಾರ್ ಹೆಗ್ಡೆ,
​ಫಿಟ್ಟಿಂಗ್ ಮತ್ತು ವೆಲ್ಡಿಂಗ್ ವಿಭಾಗವನ್ನು ಸುಜ್ಞಾನ ಎಜುಕೇಶನ್ ಟ್ರಸ್ಟ್ ಚೇರ್ಮನ್ ಡಾ. ರಮೇಶ್ ಶೆಟ್ಟಿ
ಉದ್ಘಾಟಿಸಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಪ್ರಗತಿಗೆ ಶ್ರಮಿಸಿದ ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೆಬಲ್ ಟ್ರಸ್ಟ್ ಗೌರವ ಟ್ರಸ್ಟಿ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ, ತಾಂತ್ರಿಕ ಸಲಹೆಗಾರ ಎ. ಬಾಲಕೃಷ್ಣ ಮತ್ತು ಫ್ಯಾಶನ್ ಡಿಸೈನ್ ವಿಭಾಗದ ಮುಖ್ಯಸ್ಥೆ ಶ್ರೀವಿದ್ಯಾ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಪ್ರಜ್ವಲ್ ಆರ್. ಆಚಾರ್, ತೇಜಸ್ ಆರ್. ಆಚಾರ್ ಹಾಗೂ ರಕ್ಷತ್ ಆರ್. ಆಚಾರ್ ಉಪಸ್ಥಿತರಿದ್ದರು.

ಸುಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ತಾಂತ್ರಿಕ ಸಲಹೆಗಾರ ಎ. ಬಾಲಕೃಷ್ಣ ಅಧ್ಯಯನ ವಿಭಾಗವನ್ನು ಮತ್ತು ಶ್ರೀವಿದ್ಯಾ ಫ್ಯಾಶನ್ ಡಿಸೈನ್ ವಿಭಾಗವನ್ನು ಪರಿಚಯಿಸಿದರು.
ಪ್ರಜ್ವಲ್ ಆರ್. ಆಚಾರ್ ಪ್ರಾಯೋಗಿಕ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ವಾಗ್ಮಿ ದಾಮೋದರ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರೆ, ತೇಜಸ್ ಆರ್. ಆಚಾರ್ ಧನ್ಯವಾದ ಸಮರ್ಪಿಸಿದರು.