ಡೈಲಿವಾರ್ತೆ: 26/ಮೇ/2026

ಸಿಎಂ ಬದಲಾವಣೆ ಚರ್ಚೆಯೇ ಇಲ್ಲ: ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆ ಬಳಿಕ ಕೆ.ಸಿ. ವೇಣುಗೋಪಾಲ್ ಸ್ಪಷ್ಟನೆ

ನವದೆಹಲಿ: ಕರ್ನಾಟಕ ಕಾಂಗ್ರೆಸ್ ನಾಯಕರೊಂದಿಗೆ ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆ ಬಳಿಕ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಸಿಎಂ ಬದಲಾವಣೆ ಸೇರಿದಂತೆ ಹಲವು ಊಹಾಪೋಹಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸ್ಪಷ್ಟನೆ ನೀಡಿದ್ದು, ಸಭೆಯಲ್ಲಿ ಕೇವಲ ಮುಂಬರುವ ಚುನಾವಣಾ ವಿಚಾರಗಳ ಬಗ್ಗೆ ಮಾತ್ರ ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇಣುಗೋಪಾಲ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳಿಗಿಂತ ಮುಂಬರುವ ವಿಧಾನ ಪರಿಷತ್ ಚುನಾವಣೆ ಮತ್ತು ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಕುರಿತಾಗಿ ಮಾತ್ರ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು. ಚುನಾವಣಾ ಕಾರ್ಯತಂತ್ರ ಮತ್ತು ಪಕ್ಷ ಸಂಘಟನೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತುಕತೆ ನಡೆದಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯಗಳ ಕುರಿತು ಚರ್ಚೆ ನಡೆದಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಿಎಂ ಬದಲಾವಣೆ ಸೇರಿದಂತೆ ಉಳಿದ ಎಲ್ಲಾ ಸುದ್ದಿಗಳು ಕೇವಲ ಊಹಾಪೋಹ ಮತ್ತು ವದಂತಿಗಳು ಎಂದು ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನವೇ ರಣದೀಪ್ ಸಿಂಗ್ ಸುರ್ಜೇವಾಲಾ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ ಎಂದು ತಿಳಿಸಿದ್ದರು. ಆದರೆ ಸುದ್ದಿಗೋಷ್ಠಿ ಅಂತ್ಯವಾದ ಬಳಿಕ ಮಾಧ್ಯಮ ಪ್ರತಿನಿಧಿಗಳು ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ನಡೆಯಲಿದೆಯೇ? ಎಂಬ ಪ್ರಶ್ನೆ ಕೇಳಿದರೂ ನಾಯಕರು ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು. ಸುದ್ದಿಗೋಷ್ಠಿಯ ಸಂಪೂರ್ಣ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮೌನವಾಗಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು. ಕಾರ್ಯಕ್ರಮದ ಬಳಿಕ ಸಿದ್ದರಾಮಯ್ಯ ನೇರವಾಗಿ ವಾಹನ ಏರಿದರೆ, ಡಿ.ಕೆ. ಶಿವಕುಮಾರ್ ಅವರು ಕೆ.ಸಿ. ವೇಣುಗೋಪಾಲ್ ಜೊತೆ ಮಾತುಕತೆ ನಡೆಸುತ್ತಾ ಎಐಸಿಸಿ ಕಚೇರಿಯೊಳಗೆ ತೆರಳಿದರು.ದೆಹಲಿಯ ಈ ಸಭೆಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಚರ್ಚೆಗಳು ಮತ್ತೆ ಚುರುಕುಗೊಂಡಿದ್ದು, ಹೈಕಮಾಂಡ್ ನೀಡಿದ ಸ್ಪಷ್ಟನೆ ರಾಜಕೀಯ ಊಹಾಪೋಹಗಳಿಗೆ ತಾತ್ಕಾಲಿಕ ತೆರೆ ಎಳೆದಂತಾಗಿದೆ.