




ಡೈಲಿವಾರ್ತೆ: 27/ಮೇ/2026


ಮುಲ್ಕಿ: ಬೈಕ್ ಹಾಗೂ ಮೊಬೈಲ್ ಕಳ್ಳತನ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

ಮುಲ್ಕಿ: ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಮುಲ್ಕಿ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಸತತ ಅಪರಾಧ ಹಿನ್ನೆಲೆಯುಳ್ಳ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕಳುವಾಗಿದ್ದ ಬೈಕ್ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಸುರತ್ಕಲ್ ನಿವಾಸಿ ಮೊಹಮ್ಮದ್ ರಾಝಿಕ್ (36) ಮತ್ತು ಬೈಕಂಪಾಡಿ ನಿವಾಸಿ ಉಬೈದತ್ ಹೈದರ್ (31) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಮೇ 18ರ ಸೋಮವಾರದಂದು ಮುಲ್ಕಿ ಜಂಕ್ಷನ್ ಸಮೀಪದ ಅಪೋಲೊ ಫಾರ್ಮಸಿ ಮುಂಭಾಗ ನಿಲ್ಲಿಸಲಾಗಿದ್ದ ಹೋಂಡಾ ಯುನಿಕಾರ್ನ್ ಮೋಟಾರ್ ಸೈಕಲ್ ಅನ್ನು ಆರೋಪಿಗಳು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆಯನ್ನು ತೇಜಸ್ವಿಗೊಳಿಸಿದ್ದರು.
ಮುಲ್ಕಿ ಪೊಲೀಸ್ ಠಾಣೆಯ ಉಪನಿರೀಕ್ಷಕರು (ಪಿಎಸ್‌ಐ) ಹಾಗೂ ಅಪರಾಧ ಪತ್ತೆ ದಳದ (ಕ್ರೈಂ ಟೀಮ್) ಸಿಬ್ಬಂದಿಗಳು ಜಂಟಿಯಾಗಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ. ಬಂಧಿತರಿಂದ ಅಂದಾಜು 20,000 ರೂ. ಮೌಲ್ಯದ ಕಳುವಾಗಿದ್ದ ಹೋಂಡಾ ಯುನಿಕಾರ್ನ್ ಬೈಕ್ ಹಾಗೂ ಸುಮಾರು 18,000 ರೂ. ಮೌಲ್ಯದ ಎರಡು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಕಾರ್ಯಾಚರಣೆಯ ಬಳಿಕ ಇಬ್ಬರೂ ಆರೋಪಿಗಳನ್ನು ಕಾನೂನು ಪ್ರಕ್ರಿಯೆಯಂತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮುಲ್ಕಿ ಪೊಲೀಸರ ಈ ಕ್ಷಿಪ್ರ ಹಾಗೂ ದಕ್ಷ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.