




ಡೈಲಿವಾರ್ತೆ: 27/ಮೇ/2026


ರಾಜೀನಾಮೆ ವದಂತಿ ನಡುವೆ ವಿಧಾನಸೌಧದಲ್ಲಿ ಆವೇಶ-ಆಕ್ರಂದನ: “ಅಪ್ಪಾಜಿ ಹೋಗಬೇಡಿ” ಸಿಬ್ಬಂದಿಯ ಕಣ್ಣೀರು, ಮೌನವಾಗಿ ತೆರಳಿದ ಸಿದ್ದರಾಮಯ್ಯ

ಬೆಂಗಳೂರು, ಮೇ 27: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆಯ ವದಂತಿಗಳ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 28ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿವೆ. ಈ ಬೆಳವಣಿಗೆಯ ಬೆನ್ನಲ್ಲೇ ವಿಧಾನಸೌಧದಲ್ಲಿ ಭಾವನಾತ್ಮಕ ದೃಶ್ಯಗಳು ಕಂಡುಬಂದವು.
ವಿಧಾನಸೌಧದ ಆಡಳಿತ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಮಹಿಳಾ ಸಿಬ್ಬಂದಿ ಹಾಗೂ ನೌಕರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೋಡಿ ಕಣ್ಣೀರಿಟ್ಟ ಘಟನೆ ಗಮನ ಸೆಳೆಯಿತು.
“ಅಪ್ಪಾಜಿ… ನೀವು ಹೋದ್ರೆ ನಮ್ಮನ್ನ ಕೈ ಬಿಡ್ತಾರೆ… ನಿಮ್ಮ ಹೆಸರು ಹೇಳಿಕೊಂಡೇ ಬದುಕುತ್ತಿದ್ದೇವೆ” ಎಂದು ಸಿಬ್ಬಂದಿ ಭಾವುಕರಾಗಿ ಮನವಿ ಮಾಡಿಕೊಂಡರು.
ಸಿಎಂ ಸಿದ್ದರಾಮಯ್ಯ ಅವರ ಸುತ್ತ ಅಭಿಮಾನಿಗಳು ಮತ್ತು ಸಿಬ್ಬಂದಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. “ಸಿದ್ದರಾಮಯ್ಯ ಬೇಕು” ಎಂಬ ಘೋಷಣೆಗಳು ವಿಧಾನಸೌಧದ ಆವರಣದಲ್ಲಿ ಮೊಳಗಿದವು. ಆದರೆ ಈ ಎಲ್ಲ ಭಾವನಾತ್ಮಕ ಕ್ಷಣಗಳ ನಡುವೆಯೂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದೇ, ತಮ್ಮ ಹಳೆಯ ಶೈಲಿಯಲ್ಲೇ ಮೌನವಾಗಿ ಅಲ್ಲಿಂದ ತೆರಳಿದರು.
ಸಿಎಂ ಮುಖಭಾವದಲ್ಲಿ ಗಂಭೀರತೆ ಸ್ಪಷ್ಟವಾಗಿ ಕಂಡುಬಂದಿದ್ದು, ರಾಜಕೀಯ ಬೆಳವಣಿಗೆಗಳ ಕುರಿತು ಅವರು ಯಾವುದೇ ಹೇಳಿಕೆ ನೀಡದಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ರಾಜಕೀಯ ವಲಯದಲ್ಲಿ ಸಿಎಂ ಸ್ಥಾನ ಬದಲಾವಣೆ ಕುರಿತು ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಹೈಕಮಾಂಡ್‌ನ ಮುಂದಿನ ನಡೆ ಏನಾಗಲಿದೆ ಎಂಬುದರ ಮೇಲೆ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.