ಡೈಲಿವಾರ್ತೆ: 29/ಮೇ/2026

ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರ ಅಂಗೀಕಾರ; ಹೊಸ ಸರ್ಕಾರ ರಚನೆಗೆ ವೇಗ, ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಅಂಗೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆಯೊಂದಿಗೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆಗೆ ಮತ್ತಷ್ಟು ವೇಗ ಸಿಕ್ಕಿದ್ದು, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮೂಲಗಳ ಪ್ರಕಾರ, ಸಂವಿಧಾನಬದ್ಧವಾಗಿ ಮುಖ್ಯಮಂತ್ರಿಯ ರಾಜೀನಾಮೆ ಪತ್ರವನ್ನು ರಾಜ್ಯಪಾಲರು ಅಂಗೀಕರಿಸಿದ್ದು, ಈ ಕುರಿತು ಲೋಕಭವನದಿಂದ ಅಧಿಕೃತ ಆದೇಶ ಹೊರಬಿದ್ದಿದೆ ಎನ್ನಲಾಗಿದೆ. ಆದರೆ ಹೊಸ ಸರ್ಕಾರ ರಚನೆಯಾಗುವವರೆಗೆ ಸಿದ್ದರಾಮಯ್ಯ ಅವರು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.ರಾಜ್ಯಪಾಲರು ರಾಜಧಾನಿಯಲ್ಲಿ ಇಲ್ಲದಿದ್ದ ಕಾರಣ, ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಸಲ್ಲಿಸಿದ್ದರು. ಕಾರ್ಯದರ್ಶಿಗಳು ಪತ್ರವನ್ನು ಸ್ವೀಕರಿಸಿದ್ದರೂ, ಸಂವಿಧಾನಾತ್ಮಕ ನಿಯಮಗಳ ಪ್ರಕಾರ ಅಂತಿಮ ಅಂಗೀಕಾರಕ್ಕೆ ರಾಜ್ಯಪಾಲರ ಸಹಿ ಅಗತ್ಯವಾಗಿತ್ತು. ಗುರುವಾರ ರಾತ್ರಿ ಇಂದೋರ್‌ನಿಂದ ಬೆಂಗಳೂರಿಗೆ ಮರಳಿದ ರಾಜ್ಯಪಾಲರು ಇಂದು ಬೆಳಗ್ಗೆ ರಾಜೀನಾಮೆ ಪತ್ರವನ್ನು ಪರಿಶೀಲಿಸಿ ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಇದರೊಂದಿಗೆ ರಾಜ್ಯದ ಮುಂದಿನ ನಾಯಕತ್ವದ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದೆ. ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ) ಸಭೆ ನಡೆಯುವ ಸಾಧ್ಯತೆ ಇದ್ದು, ಆ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.ಪಕ್ಷದ ಉನ್ನತ ಮೂಲಗಳ ಪ್ರಕಾರ, ಎಲ್ಲ ಬೆಳವಣಿಗೆಗಳು ನಿರೀಕ್ಷೆಯಂತೆ ನಡೆದರೆ ಸೋಮವಾರ ಸಂಜೆ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಂಬಂಧ ಲೋಕಭವನದಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭಕ್ಕೆ ಭರದ ಸಿದ್ಧತೆಗಳು ಆರಂಭಗೊಂಡಿವೆ ಎನ್ನಲಾಗಿದೆ.