ಡೈಲಿವಾರ್ತೆ: 29/ಮೇ/2026

ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ‘ಸಮಗ್ರ ಪ್ರಗತಿ ಪತ್ರಿಕೆ’ ಕುರಿತು ವಿಶೇಷ ಉಪನ್ಯಾಸ – ನವೀನ ಬೋಧನಾ ವಿಧಾನಗಳ ಮೂಲಕ ಕಲಿಕಾ ಫಲಿತಾಂಶ ಹೆಚ್ಚಿಸಲು ಶಿಕ್ಷಕರಿಗೆ ಕರೆ

ವಕ್ವಾಡಿ, ಮೇ 29: ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಮೌಲ್ಯಮಾಪನ ವ್ಯವಸ್ಥೆ ಮತ್ತು ಕಲಿಕಾ ಫಲಿತಾಂಶಗಳ ಸಾಧನೆ ಅತ್ಯಂತ ಮಹತ್ವದ್ದಾಗಿದ್ದು, ಇದಕ್ಕಾಗಿ ಶಿಕ್ಷಕರು ನವೀನ ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಣ ತಜ್ಞೆ ಹಾಗೂ ಸಿಬಿಎಸ್‌ಇ ಮಾಸ್ಟರ್ ಟ್ರೈನರ್ ಶ್ರೀಮತಿ ವಂಶಿಪ್ರಿಯ ಅಮರ್ ಅಭಿಪ್ರಾಯಪಟ್ಟರು.
ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ಸಮಗ್ರ ಪ್ರಗತಿ ಪತ್ರಿಕೆಯ ಮೂಲ ಹಾಗೂ ಕಲಿಕಾ ಫಲಿತಾಂಶ ಮತ್ತು ಬೋಧನಾ ವಿಧಾನಗಳು ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಹಂತದಲ್ಲಿ ಕೇವಲ ಪಾಠ ಬೋಧನೆಗೆ ಸೀಮಿತವಾಗದೆ ವಿದ್ಯಾರ್ಥಿಗಳ ಸಮಗ್ರ ಮೌಲ್ಯಮಾಪನ, ಪ್ರಗತಿಪತ್ರಿಕೆಗಳ ಸಿದ್ಧತೆ ಹಾಗೂ ಕಲಿಕಾ ಫಲಿತಾಂಶಗಳ ಪರಿಣಾಮಕಾರಿ ಅನುಷ್ಠಾನಕ್ಕೂ ಶಿಕ್ಷಕರು ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು. ಚಟುವಟಿಕೆ ಆಧಾರಿತ ಪಾಠಕ್ರಮ, ನವೀನ ಬೋಧನಾ ತಂತ್ರಗಳು ಹಾಗೂ ವಿದ್ಯಾರ್ಥಿ ಕೇಂದ್ರಿತ ಕಲಿಕಾ ವಿಧಾನಗಳ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಸೃಜನಶೀಲ ಸಾಮರ್ಥ್ಯವನ್ನು ವೃದ್ಧಿಸಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕಿ ಶ್ರೀಮತಿ ಅನುಪಮಾ ಎಸ್. ಶೆಟ್ಟಿ ಮಾತನಾಡಿ, ಶಿಕ್ಷಕರು ತಮ್ಮ ಅಧ್ಯಯನ, ಅನುಭವ ಮತ್ತು ಜೀವನ ಮೌಲ್ಯಗಳನ್ನು ಬೋಧನೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡು ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬೇಕು ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲೆ ಡಾ. ರೂಪಾ ಶೆಣೈ ಅವರು ಶಿಕ್ಷಕರಿಗೆ ಶುಭ ಹಾರೈಸಿ, ಇಂತಹ ಶೈಕ್ಷಣಿಕ ತರಬೇತಿ ಕಾರ್ಯಕ್ರಮಗಳು ಬೋಧನಾ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ನೆರವಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ ಭಾಗವಹಿಸಿದ್ದರು. ಶಿಕ್ಷಕಿ ಮಮತಾ ಕುಮಾರಿ ಕಾರ್ಯಕ್ರಮವನ್ನು ನಿರ್ವಹಿಸಿದರು.