




ಡೈಲಿವಾರ್ತೆ: 30/ಮೇ/2026


ಉಪ್ಪುಂದ: ವಾಟ್ಸಪ್ ಗ್ರೂಪ್‌ನಲ್ಲಿ ಕೋಳಿ ಜೂಜಾಟಕ್ಕೆ ಪೊಲೀಸ್ ದಾಳಿ: ಆರೋಪಿ ವಶಕ್ಕೆ, ಮೊಬೈಲ್ ಜಪ್ತಿ

ಬೈಂದೂರು, ಮೇ 30: ವಾಟ್ಸಪ್ ಗ್ರೂಪ್ ಮೂಲಕ ಕೋಳಿ ಮೇಲೆ ಟೋಕನ್ ನೀಡಿ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಬೈಂದೂರು ಪೊಲೀಸರು ಬಂಧಿಸಿ, ಜೂಜಾಟಕ್ಕೆ ಬಳಸಲಾಗಿದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಮೇ 29ರಂದು ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಪರಿಚಯ ಹೋಟೆಲ್‌ನ ದಕ್ಷಿಣ ಬದಿಯ ಗ್ಯಾರೇಜ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಕೋಳಿ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸ್ ಉಪನಿರೀಕ್ಷಕ ಸುನಿಲ್ ಕುಮಾರ ಬಿ.ಎನ್. ಅವರಿಗೆ ಲಭಿಸಿತ್ತು. ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು, ಜೂಜಾಟದಲ್ಲಿ ತೊಡಗಿದ್ದ ಉಪ್ಪುಂದ ಗ್ರಾಮದ ಸಚಿನ್ ಎಂಬಾತನನ್ನು ವಶಕ್ಕೆ ಪಡೆದುಕೊಂಡರು. ಆರೋಪಿಯ ಬಳಿಯಿದ್ದ VIVO V20 ಮೊಬೈಲ್ ಫೋನ್ ಅನ್ನು ಜಪ್ತಿ ಮಾಡಲಾಗಿದ್ದು, ಅದನ್ನು ಜೂಜಾಟದ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 71/2026 ದಾಖಲಿಸಲಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.