




ಡೈಲಿವಾರ್ತೆ: 30/ಮೇ/2026


ಕರ್ನಾಟಕಕ್ಕೆ ಹೊಸ ನಾಯಕತ್ವ: ಜೂನ್ 3ರಂದು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಪ್ರಮಾಣವಚನ

ಬೆಂಗಳೂರು, ಮೇ 30: ಹಲವು ದಿನಗಳಿಂದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಕೊನೆಗೂ ತೆರೆ ಬಿದ್ದಿದ್ದು, ಜೂನ್ 3ರಂದು ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲ್ಪಟ್ಟಿರುವ ಈ ಪ್ರಮಾಣವಚನ ಸಮಾರಂಭವನ್ನು ಬೆಂಗಳೂರಿನ ರಾಜಭವನದ ಗ್ಲಾಸ್ ಹೌಸ್‌ನಲ್ಲಿ ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ. ಆರಂಭದಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸುವ ಕುರಿತು ಚರ್ಚೆಗಳು ನಡೆದಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಅಂತಿಮ ಕ್ಷಣದಲ್ಲಿ ಸರಳ ಸಮಾರಂಭಕ್ಕೆ ಒಲವು ತೋರಿದೆ.
ಡಿ.ಕೆ. ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿರುವ ಹಿನ್ನೆಲೆಯಲ್ಲಿ ಭವ್ಯ ಸಮಾರಂಭದ ಸಿದ್ಧತೆಗಳು ನಡೆದಿದ್ದವು. ಆದರೆ ತೈಲ ಬೆಲೆ ಏರಿಕೆ, ಸಾರ್ವಜನಿಕ ವೆಚ್ಚದ ನಿಯಂತ್ರಣ ಹಾಗೂ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ಕೈಬಿಡುವಂತೆ ಸೂಚನೆ ನೀಡಲಾಗಿದೆ.
ಹೈಕಮಾಂಡ್‌ನ ನಿರ್ದೇಶನದಂತೆ ಸರಳತೆ ಮತ್ತು ಆಡಳಿತಾತ್ಮಕ ಜವಾಬ್ದಾರಿತನಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಪ್ರಮಾಣವಚನ ಸಮಾರಂಭವನ್ನು ಮಿತವ್ಯಯದ ಮಾದರಿಯಲ್ಲಿ ನಡೆಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಘಟ್ಟವಾಗಿರುವ ಈ ಕಾರ್ಯಕ್ರಮದೊಂದಿಗೆ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಹೊಸ ಸರ್ಕಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದೆ. ಹೊಸ ನಾಯಕತ್ವದ ಮೇಲೆ ಜನತೆ ಹಾಗೂ ಪಕ್ಷದ ಕಾರ್ಯಕರ್ತರ ನಿರೀಕ್ಷೆಗಳು ಹೆಚ್ಚಿದ್ದು, ರಾಜ್ಯದ ಆಡಳಿತದ ದಿಕ್ಕು ಮತ್ತು ಅಭಿವೃದ್ಧಿ ಕಾರ್ಯಗಳತ್ತ ಎಲ್ಲರ ಗಮನ ನೆಟ್ಟಿದೆ.