ಡೈಲಿವಾರ್ತೆ: 02/ಜೂ./2026

ಹೆಬ್ರಿ: ಅಂತರ್‌ರಾಜ್ಯ ಖದೀಮರ ಜಾಲ ಸೀಳಿದ ಪೊಲೀಸರು – ಮೂವರ ಬಂಧನ, ಲಕ್ಷಾಂತರ ಮೌಲ್ಯದ ಚಿನ್ನ ವಶಕ್ಕೆ

​ಹೆಬ್ರಿ: ಇಲ್ಲಿನ ತಾಲೂಕಿನ ಅನಂತನಗರದಲ್ಲಿ ಇತ್ತೀಚೆಗೆ ನಡೆದಿದ್ದ ಬರೋಬ್ಬರಿ 60 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಉಡುಪಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕುಖ್ಯಾತ ಅಂತರ್‌ರಾಜ್ಯ ಕಳ್ಳರನ್ನು ಹೆಡೆಮುರಿಕಟ್ಟಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

​​ಮೇ 25ರಂದು ರಾತ್ರಿ ಮನೆಯವರೆಲ್ಲರೂ ಗಾಢ ನಿದ್ರೆಯಲ್ಲಿದ್ದ ಸಂದರ್ಭವನ್ನು ಸಂಚುಗಾರರು ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದರು. ಮನೆಯ ಹಿಂಭಾಗದ ಕಿಟಕಿಯ ಕೊಂಡಿಯನ್ನು ಅತ್ಯಂತ ಚಾಣಾಕ್ಷತನದಿಂದ ಮುರಿದು ಒಳನುಗ್ಗಿದ್ದ ಕಳ್ಳರು, ಮೊದಲ ಮಹಡಿಯ ಕೋಣೆಯಲ್ಲಿದ್ದ ಬೀರುವನ್ನು ಒಡೆದು ಸರಿಸುಮಾರು 59.97 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಘಟನೆ ಸ್ಥಳೀಯವಾಗಿ ತೀವ್ರ ಆತಂಕ ಮೂಡಿಸಿತ್ತು.

​ಪ್ರಕರಣದ ಗಾಂಭೀರ್ಯತೆಯನ್ನು ಅರಿತು ತಕ್ಷಣವೇ ಕಾರ್ಯಪ್ರವೃತ್ತರಾದ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ಹಾಗೂ ಪ್ರಭಾರ ವೃತ್ತ ನಿರೀಕ್ಷಕ ರಾಘವೇಂದ್ರ ಆರ್. ನೇತೃತ್ವದ ವಿಶೇಷ ಪೊಲೀಸ್ ತಂಡವು ತನಿಖೆಯನ್ನು ಚುರುಕುಗೊಳಿಸಿತ್ತು. ಖಚಿತ ಮಾಹಿತಿ ಹಾಗೂ ತಾಂತ್ರಿಕ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಬ್ದಿನ್ ಸಲೀಂ (51), ಹರೀಶ್‌ ಶೆಟ್ಟಿ (40), ಸಫಾನ್ (32) ​ಬಂಧಿತ ಆರೋಪಿಗಳು.
ಬಂಧಿತ ಖದೀಮರಿಂದ ಸದ್ಯ 37.87 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಲಾಗಿದ್ದ 4 ಲಕ್ಷ ರೂ. ಮೌಲ್ಯದ ಆಲ್ಟೋ ಕಾರನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.

​ಈ ದರೋಡೆ ಜಾಲದ ಮತ್ತೋರ್ವ ಪ್ರಮುಖ ಆರೋಪಿಯಾಗಿರುವ ಪ್ರಕಾಶ್ ಎಂಬಾತ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆಯನ್ನು ಬೀಸಿದ್ದಾರೆ. ಶೀಘ್ರದಲ್ಲೇ ಆತನನ್ನೂ ಸಹ ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

​ಈಗ ಬಂಧನಕ್ಕೊಳಗಾಗಿರುವ ಆರೋಪಿಗಳು ಸಾಧಾರಣ ಕಳ್ಳರಲ್ಲ, ಬದಲಿಗೆ ಅಂತರರಾಜ್ಯ ಮಟ್ಟದ ಕುಖ್ಯಾತ ಅಪರಾಧಿಗಳಾಗಿದ್ದಾರೆ. ಇವರ ವಿರುದ್ಧ ಈಗಾಗಲೇ ಕೇರಳ, ಕಾಸರಗೋಡು, ಕಾರವಾರ, ಮಂಗಳೂರು ಹಾಗೂ ಮೂಡುಬಿದ್ರೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ಕೊಲೆ, ಹಲ್ಲೆ ಹಾಗೂ ಮಾದಕ ವಸ್ತು (ಡ್ರಗ್ಸ್) ಸಾಗಾಟಕ್ಕೆ ಸಂಬಂಧಿಸಿದ ಗಂಭೀರ ಸ್ವರೂಪದ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ.
​ಪೊಲೀಸರ ಈ ಶ್ಲಾಘನೀಯ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.