ಡೈಲಿವಾರ್ತೆ: 18/ಜು./2026

ಕೊಡಚಾದ್ರಿ ಪ್ರವಾಸಕ್ಕೆ ಬಂದ ಬೆಂಗಳೂರಿನ ಯುವಕ ಹೃದಯಾಘಾತಕ್ಕೆ ಬಲಿ

ಹೊಸನಗರ: ಕೊಡಚಾದ್ರಿ ಪ್ರವಾಸಕ್ಕೆ ಬಂದ ಬೆಂಗಳೂರಿನ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೆಕಟ್ಟೆ ಸಮೀಪ ಕಟ್ಟಿನಹೊಳೆ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿ ಬೆಂಗಳೂರು ಮೂಲದ ಶ್ರೀಕಾಂತ್ (28) ಎಂದು ಗುರುತಿಸಲಾಗಿದೆ.
ಶ್ರೀಕಾಂತ್ ಮೂವರು ಸ್ನೇಹಿತರೊಂದಿಗೆ ಕೊಡಚಾದ್ರಿ ಪ್ರವಾಸಕ್ಕೆ ಶುಕ್ರವಾರ ಬಂದಿದ್ದು ಕಟ್ಟಿನ ಹೊಳೆ ಗ್ರಾಮದ ಸ್ನೇಹಿತನ ಮನೆಯಲ್ಲಿ ತಂಗಿದ್ದರು.
ಶನಿವಾರ ಗೆಳೆಯರೆಲ್ಲರೂ ಕೂಡಿ ಬೆಳಿಗ್ಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು ರಾತ್ರಿ ಏಕಾಏಕಿ ಶ್ರೀಕಾಂತ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕುಸಿದು ಬಿದ್ದಿದ್ದಾನೆ ತಕ್ಷಣ ಸ್ನೇಹಿತರು ಆತನನ್ನು ಹೊಸನಗರ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದರು. ಆದರೆ ಆಸ್ಪತ್ರೆ ತಲುಪುವ ಮೊದಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.