



ಡೈಲಿವಾರ್ತೆ: 02/ಜೂ./2026


ಕೋಟ: ಉಪ್ಲಾಡಿ ತೆಂಕಬೆಟ್ಟಿನಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಪೊಲೀಸರ ದಾಳಿ – ಟಿಪ್ಪರ್ ಬಿಟ್ಟು ಚಾಲಕ ಪರಾರಿ, ವಾಹನ-ಮರಳು ವಶ

ಕೋಟ, ಜೂನ್ 2: ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನದ ಮೇಲೆ ಕೋಟ ಪೊಲೀಸರು ದಾಳಿ ನಡೆಸಿ ವಾಹನ, ಮರಳು ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡ ಘಟನೆ ಬನ್ನಾಡಿ ಗ್ರಾಮದ ಉಪ್ಲಾಡಿ ತೆಂಕಬೆಟ್ಟು ಪ್ರದೇಶದಲ್ಲಿ ನಡೆದಿದೆ.
ದಿನಾಂಕ 01/06/2026 ರಂದು ಮಧ್ಯಾಹ್ನ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ತನಿಖೆ) ಮಹಾಂತೇಶ್ ಜಾಬಗೌಡ ಅವರು ಸಿಬ್ಬಂದಿಯೊಂದಿಗೆ ಗಸ್ತು ಕಾರ್ಯದಲ್ಲಿದ್ದ ವೇಳೆ, ಉಪ್ಲಾಡಿ ತೆಂಕಬೆಟ್ಟು ಪ್ರದೇಶದಲ್ಲಿ ಟಿಪ್ಪರ್ ವಾಹನದ ಮೂಲಕ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು KA-20-C-8248 ಸಂಖ್ಯೆಯ ಟಿಪ್ಪರ್ ವಾಹನವನ್ನು ತಡೆಹಿಡಿಯಲು ಮುಂದಾದರು.
ಈ ವೇಳೆ ವಾಹನ ಚಾಲಕನು ಟಿಪ್ಪರ್ ಹಾಗೂ ಅದರಲ್ಲಿದ್ದ ಮರಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಟಿಪ್ಪರ್ ವಾಹನವು ಶಶೀಧರ ಪೂಜಾರಿ ಎಂಬವರಿಗೆ ಸೇರಿದ್ದು ಎಂಬುದು ತಿಳಿದುಬಂದಿದೆ.
ಪರಿಶೀಲನೆ ವೇಳೆ ಟಿಪ್ಪರ್‌ನೊಳಗೆ ಸುಮಾರು 10 ಬುಟ್ಟಿಯಷ್ಟು ಮರಳು ಹಾಗೂ ವಾಹನದ ಕೆಳಭಾಗದಲ್ಲಿ ಸುಮಾರು ಮೂರು-ಕಾಲು ಯೂನಿಟ್ ಮರಳಿನ ರಾಶಿ ಪತ್ತೆಯಾಗಿದೆ.
ಜಪ್ತಿ ಮಾಡಲಾದ ಮರಳಿನ ಅಂದಾಜು ಮೌಲ್ಯ ₹6,000 ಆಗಿದ್ದು, ಟಿಪ್ಪರ್ ವಾಹನದ ಮೌಲ್ಯ ಸುಮಾರು ₹2 ಲಕ್ಷ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಚಾಲಕನು ಸ್ಥಳದಲ್ಲಿ ಬಿಟ್ಟು ಹೋದ ಒಪ್ಪೊ ಕಂಪನಿಯ ಮೊಬೈಲ್ ಹ್ಯಾಂಡ್‌ಸೆಟ್‌ನನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯಾವುದೇ ಪರವಾನಿಗೆ ಪಡೆಯದೇ ಹಾಗೂ ಸರ್ಕಾರಕ್ಕೆ ರಾಜಧನ ಪಾವತಿಸದೇ ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಮರಳನ್ನು ಕಳ್ಳತನ ಮಾಡಿ ಸಾಗಾಟ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 91/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ ಕಲಂ 303(2) ಹಾಗೂ ಎಂಎಂಆರ್‌ಡಿ ಕಾಯ್ದೆಯ 4, 4(1A) ಮತ್ತು 21ನೇ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.