ಡೈಲಿವಾರ್ತೆ: 02/ಜೂ./2026

ಬೆಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದ ರೆಡ್ಡಿ ಅಪಹರಣ; ₹2 ಕೋಟಿಗೆ ಬೇಡಿಕೆಯಿಟ್ಟು ಗನ್ ಪಾಯಿಂಟ್‌ನಲ್ಲಿ ಬೆದರಿಕೆ!

​ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರು ಬಳಿ ನಿನ್ನೆ ಮಧ್ಯರಾತ್ರಿ ಗನ್ ತೋರಿಸಿ ವಿಧಾನ ಪರಿಷತ್ ಮಾಜಿ ಸದಸ್ಯ (MLC) ದಯಾನಂದ ರೆಡ್ಡಿ ಅವರನ್ನು ಅಪಹರಿಸಿ, ಬರೋಬ್ಬರಿ 2 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ.​

ಘಟನೆಯ ವಿವರ: ‘ಗಿಫ್ಟ್’ ನೆಪದಲ್ಲಿ ಕಾರಿಗೆ ನುಗ್ಗಿದ ದುಷ್ಕರ್ಮಿಗಳು​

ಪೊಲೀಸ್ ಮೂಲಗಳ ಪ್ರಕಾರ, ನಿನ್ನೆ ಮಧ್ಯರಾತ್ರಿ ಸುಮಾರು 12.15ರ ವೇಳೆಗೆ ಮಾಜಿ ಎಂಎಲ್ಸಿ ದಯಾನಂದ ರೆಡ್ಡಿ ಅವರು ಹುಸ್ಕೂರು ಬಳಿಯ ಗೋಲ್ಡ್ ಕಾಯಿನ್ ಕ್ಲಬ್‌ನಿಂದ ತಮ್ಮ ಕಾರಿನಲ್ಲಿ ಹೊರಟಿದ್ದರು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಇವರ ಕಾರನ್ನು ಅಡ್ಡಗಟ್ಟಿದ್ದಾರೆ. ನಿಮಗೆ ಗಿಫ್ಟ್ ಬಂದಿದೆ ಎಂದು ಹೇಳಿ ಕಾಟನ್ ಬಾಕ್ಸ್ ಒಂದನ್ನು ತೋರಿಸಿದ್ದಾರೆ. ಇದನ್ನು ನಂಬಿ ದಯಾನಂದ ರೆಡ್ಡಿ ಅವರು ಕಾರಿನ ಡೋರ್ ಲಾಕ್ ತೆರೆಯುತ್ತಿದ್ದಂತೆ, ದುಷ್ಕರ್ಮಿಗಳ ಪೈಕಿ ಓರ್ವ ತಕ್ಷಣವೇ ಕಾರಿನೊಳಗೆ ನುಗ್ಗಿದ್ದಾನೆ.​

ನಿನ್ನ ಹತ್ಯೆಗೆ ₹10 ಕೋಟಿ ಸುಪಾರಿ ಬಂದಿದೆ: ಗನ್ ಪಾಯಿಂಟ್‌ನಲ್ಲಿ ಕೊಲೆ ಬೆದರಿಕೆ!​

ಕಾರಿಗೆ ನುಗ್ಗಿದ ಅಪಹರಣಕಾರ, ದಯಾನಂದ ರೆಡ್ಡಿ ಅವರಿಗೆ ಗನ್ ತೋರಿಸಿ ತಾನು ಹೇಳಿದ ಕಡೆಗೆ ಕಾರು ಚಲಾಯಿಸುವಂತೆ ಹೆದರಿಸಿದ್ದಾನೆ. ಇದೇ ವೇಳೆ ಕೆಂಪು ಬಣ್ಣದ ಮತ್ತೊಂದು ಕಾರಿನಲ್ಲಿ ಇಬ್ಬರು ದುಷ್ಕರ್ಮಿಗಳು ಇವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಮಾಜಿ ಎಂಎಲ್ಸಿ ಅವರನ್ನು ಅತ್ತಿಬೆಲೆಯ ಕೆ.ಹೆಚ್.ಬಿ (KHB) ಬಡಾವಣೆ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಅಪಹರಣಕಾರರು, ಅವರ ಕುತ್ತಿಗೆಗೆ ಗನ್ ಇಟ್ಟು ತೀವ್ರ ರಕ್ತಸಿಕ್ತ ಬೆದರಿಕೆ ಹಾಕಿದ್ದಾರೆ. ನಿನ್ನನ್ನು ಕೊಲ್ಲಲು ನಮಗೆ 10 ಕೋಟಿ ರೂಪಾಯಿ ಸುಪಾರಿ ಸಿಕ್ಕಿದೆ ಎಂದು ಹೇಳಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ.​

ಮಾಜಿ MLC ಸಮಯಪ್ರಜ್ಞೆ: ₹2 ಕೋಟಿಗೆ ಡೀಲ್ ಕುದುರಿಸಿದ ಕಿರಾತಕರು

ಪ್ರಾಣಾಪಾಯದಲ್ಲಿದ್ದ ದಯಾನಂದ ರೆಡ್ಡಿ ಅವರು ತಕ್ಷಣವೇ ಸಮಯಪ್ರಜ್ಞೆ ಮೆರೆದಿದ್ದಾರೆ. ಸುಪಾರಿ ಕೊಟ್ಟವರಿಗಿಂತ ಆ ಹಣವನ್ನು ತಾನೇ ನೀಡುವುದಾಗಿ, ದಯವಿಟ್ಟು ಕೊಲ್ಲಬೇಡಿ ಎಂದು ಅಪಹರಣಕಾರರಲ್ಲಿ ಮನವಿ ಮಾಡಿದ್ದಾರೆ. ಮೊದಲು 3 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಗ್ಯಾಂಗ್, ಸುದೀರ್ಘ ಚೌಕಾಸಿಯ ನಂತರ ಅಂತಿಮವಾಗಿ 2 ಕೋಟಿ ರೂಪಾಯಿ ಹಣವನ್ನು ಪಡೆಯಲು ಒಪ್ಪಿಕೊಂಡಿದೆ.​ಮುಂಜಾನೆ ಬ್ಯಾಂಕ್‌ನಿಂದ ಹಣ ನೀಡುವ ಭರವಸೆ; ತಪ್ಪಿಸಿಕೊಂಡು ದೂರು ದಾಖಲು​ಮಧ್ಯರಾತ್ರಿಯಾಗಿದ್ದರಿಂದ ಸದ್ಯಕ್ಕೆ ಅಷ್ಟು ದೊಡ್ಡ ಮೊತ್ತದ ಹಣ ಹೊಂದಿಸಲು ಸಾಧ್ಯವಿಲ್ಲ, ಬೆಳಗ್ಗೆ ಬ್ಯಾಂಕ್ ಸಮಯಕ್ಕೆ ಹಣ ಡ್ರಾ ಮಾಡಿ ನೀಡುವುದಾಗಿ ದಯಾನಂದ ರೆಡ್ಡಿ ದುಷ್ಕರ್ಮಿಗಳನ್ನು ನಂಬಿಸಿದ್ದಾರೆ. ಹಣ ಡ್ರಾ ಮಾಡಿದ ತಕ್ಷಣ ತಮಗೆ ಕರೆ ಮಾಡುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ, ಅಪಹರಣಕಾರರು ಮಾಜಿ ಎಂಎಲ್ಸಿ ಅವರನ್ನು ಅಲ್ಲಿಂದ ಬಿಟ್ಟು ಕಳುಹಿಸಿದ್ದಾರೆ.​

ಕಿರಾತಕರ ಕೈಯಿಂದ ಪ್ರಾಣಾಪಾಯದಿಂದ ಪಾರಾಗಿ ಬಂದ ದಯಾನಂದ ರೆಡ್ಡಿ ಅವರು ತಡಮಾಡದೆ ಅತ್ತಿಬೆಲೆ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಘಟನೆಯ ಗಾಂಭೀರ್ಯತೆಯನ್ನು ಅರಿತಿರುವ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ. ಜನಪ್ರತಿನಿಧಿಯಾಗಿದ್ದವರನ್ನೇ ಗನ್ ತೋರಿಸಿ ಅಪಹರಿಸಿರುವ ಈ ಘಟನೆ ಆನೇಕಲ್ ಭಾಗದಲ್ಲಿ ಸಾರ್ವಜನಿಕ ವಲಯ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.