



ಡೈಲಿವಾರ್ತೆ: 02/ಜೂ./2026


ಸಾಲಿಗ್ರಾಮ: ಪ. ಪಂ ನಲ್ಲಿ 35 ವರ್ಷಗಳ ದಕ್ಷ ಸೇವೆಗೆ ಮುಕ್ತಿ – ಪ್ರಭಾರ ಕಂದಾಯ ನಿರೀಕ್ಷಕ ಚಂದ್ರಶೇಖರ ಸೋಮಯಾಜಿಗೆ ಭಾವಪೂರ್ಣ ಬಿಳ್ಕೊಡುಗೆ:
ವೃತ್ತಿ ಬದುಕಿನ ಸಾರ್ಥಕ್ಯ ಕಂಡ ದಕ್ಷ ಅಧಿಕಾರಿ – ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಸತತ 35 ವರ್ಷಗಳ ಕಾಲ ಸುದೀರ್ಘ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಭಾರ ಕಂದಾಯ ನಿರೀಕ್ಷಕ, ಕಾರ್ಕಡದ ಚಂದ್ರಶೇಖರ ಸೋಮಯಾಜಿ ಅವರ ಸೇವಾ ಬಿಳ್ಕೊಡುಗೆ ಹಾಗೂ ಗೌರವಾಭಿನಂದನಾ ಸಮಾರಂಭವು ಮಂಗಳವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದ ನಿಷ್ಕಲ್ಮಶ ಸೇವೆ: ಗೋಪಾಲಕೃಷ್ಣ ಶೆಟ್ಟಿ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು, ಚಂದ್ರಶೇಖರ ಸೋಮಯಾಜಿ ಅವರು ತಾವು ಕಾರ್ಯನಿರ್ವಹಿಸಿದ ಕ್ಷೇತ್ರದಲ್ಲಿ ಜೀವನದ ಸಾರ್ಥಕ್ಯವನ್ನು ಕಂಡುಕೊಂಡಿದ್ದಾರೆ. ಅವರ ನಿಷ್ಕಲ್ಮಶ ಹಾಗೂ ಪ್ರಾಮಾಣಿಕ ಕಾರ್ಯವೈಖರಿಗೆ ಇಡೀ ಸಾರ್ವಜನಿಕ ವಲಯವೇ ಪ್ರಶಂಸೆಯ ಗರಿಯನ್ನು ನೀಡಿದೆ. ಪಟ್ಟಣ ಪಂಚಾಯತ್‌ನಲ್ಲಿ ಅವರಿಗಿದ್ದ ಹಿರಿತನ ಹಾಗೂ ದಕ್ಷ ಅನುಭವ ಪ್ರತಿಯೊಬ್ಬ ಸಿಬ್ಬಂದಿಗೂ ಮಾದರಿಯಾಗಿದೆ. ವೃತ್ತಿ ಕಾಯಕದ ಜೊತೆಗೆ ಅವರು ಮಾಡಿಕೊಂಡು ಬಂದ ಸಾಮಾಜಿಕ ಕಾರ್ಯಗಳು ಅತ್ಯಂತ ಶ್ರೇಷ್ಠವಾದುದು ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಸೇವಾ ನಿವೃತ್ತಿ ಹೊಂದಿದ ಪ್ರಭಾರ ಕಂದಾಯ ನಿರೀಕ್ಷಕ ಚಂದ್ರಶೇಖರ ಸೋಮಯಾಜಿ ಹಾಗೂ ಅವರ ಧರ್ಮಪತ್ನಿ ಪವಿತ್ರ ಸೋಮಯಾಜಿ ದಂಪತಿಗಳನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಅವರು, ಇಲಾಖೆಯಲ್ಲಿ ಸೋಮಯಾಜಿ ಅವರು ತೋರಿದ ಕರ್ತವ್ಯನಿಷ್ಠೆ ಮತ್ತು ಸಹೋದ್ಯೋಗಿಗಳಿಗೆ ನೀಡಿದ ಮಾರ್ಗದರ್ಶನವನ್ನು ಸ್ಮರಿಸಿ, ಪಟ್ಟಣ ಪಂಚಾಯತ್ ಪರವಾಗಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿ ಗೌರವದ ವಿದಾಯ ಕೋರಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಸುಕನ್ಯಾ ಜೆ. ಶೆಟ್ಟಿ, ಉಡುಪಿ ಜಿಲ್ಲಾ ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಶೆಟ್ಟಿ ಹಾಗೂ ಪಟ್ಟಣ ಪಂಚಾಯತ್ ಹಿರಿಯ ಗ್ರಾಮಸ್ಥರಾದ ಶ್ರೀನಿವಾಸ್ ಉಪಾಧ್ಯಾ ಉಪಸ್ಥಿತರಿದ್ದು, ನಿವೃತ್ತ ಅಧಿಕಾರಿಗೆ ಶುಭ ಹಾರೈಸಿದರು. ಪಟ್ಟಣ ಪಂಚಾಯತ್ ಸಿಬ್ಬಂದಿ ಸುಮಿತಾ ಕಾರ್ಯಕ್ರಮವನ್ನು ಸ್ವಾಗತಿಸಿ, ಅಚ್ಚುಕಟ್ಟಾಗಿ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.