



ಡೈಲಿವಾರ್ತೆ: 03/ಜೂ./2026


ದೆಹಲಿ ರೆಸ್ಟೋರೆಂಟ್ ನಲ್ಲಿ ಭೀಕರ ಅಗ್ನಿ ದುರಂತ: ವಿದೇಶಿಗರು ಸೇರಿ 21 ಮಂದಿ ಸಜೀವ ದಹನ, ಹಲವರ ಸ್ಥಿತಿ ಗಂಭೀರ

ನವದೆಹಲಿ: ದಕ್ಷಿಣ ದೆಹಲಿಯ ಮಾಳ್ವಿಯಾ ನಗರದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ವಿದೇಶಿಯರು ಸೇರಿದಂತೆ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. ಆರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿದ್ದ ರೆಸ್ಟೋರೆಂಟ್‌ವೊಂದರಲ್ಲಿ ಈ ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಇಂದು (ಜೂನ್ 3) ಬೆಳಿಗ್ಗೆ ಸುಮಾರು 8:50ರ ವೇಳೆಗೆ ರೆಸ್ಟೋರೆಂಟ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ನೆಲ ಮಾಳಿಗೆಯಲ್ಲಿ (ಬೇಸ್‌ಮೆಂಟ್) ಮೊದಲು ಕಾಣಿಸಿಕೊಂಡ ಜ್ವಾಲೆ, ನೋಡನೋಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಇಡೀ ಆರು ಅಂತಸ್ತಿನ ಕಟ್ಟಡಕ್ಕೆ ವ್ಯಾಪಿಸಿತು. ಬೆಂಕಿಯ ತೀವ್ರತೆಗೆ ಸಿಲುಕಿ ರೆಸ್ಟೋರೆಂಟ್‌ನಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿ ಹೊರಬರಲಾರದೆ ಒಳಗೆಯೇ ಸಿಲುಕಿಕೊಂಡರು.

37 ಜನರ ರಕ್ಷಣೆ, ಮುಂದುವರಿದ ಚಿಕಿತ್ಸೆ:
ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ 10 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಭೀಕರ ಜ್ವಾಲೆಯ ನಡುವೆಯೂ ಕಾರ್ಯಾಚರಣೆ ನಡೆಸಿ 37 ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ದುರಂತದಲ್ಲಿ 21 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಕೆಲವರು ವಿದೇಶಿ ಪ್ರಜೆಗಳಾಗಿದ್ದಾರೆ. ಇನ್ನುಳಿದಂತೆ ಗಾಯಗೊಂಡವರಲ್ಲಿ ಹಲವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಅಗ್ನಿಶಾಮಕ ದಳದ ನಿರಂತರ ಹೋರಾಟದ ಬಳಿಕ ಸದ್ಯ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಶಾರ್ಟ್ ಸರ್ಕ್ಯೂಟ್ ಅಥವಾ ಗ್ಯಾಸ್ ಸಿಲಿಂಡರ್ ಸೋರಿಕೆ ದುರಂತಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದ್ದು, ಘಟನೆಯ ನಿಖರ ಕಾರಣ ತಿಳಿಯಲು ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡ ತನಿಖೆ ಆರಂಭಿಸಿದೆ.