ಡೈಲಿವಾರ್ತೆ: 05/ಜೂ./2026

ರಸ್ತೆ ಕಾಮಗಾರಿ ಗುಂಡಿಗೆ ಬಿದ್ದು ಸರ್ಕಾರಿ ಆಸ್ಪತ್ರೆ ನರ್ಸ್ ದುರ್ಮರಣ: ಪತಿಗೆ ಗಂಭೀರ ಗಾಯ

​ಬಳ್ಳಾರಿ: ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಅಕ್ಷಮ್ಯ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ.

ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ದಂಪತಿ ಬೈಕ್ ಸಮೇತ ಹೆದ್ದಾರಿಯ ರಸ್ತೆ ಗುಂಡಿಗೆ ಬಿದ್ದ ಪರಿಣಾಮ, ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿ, ಪತಿ ತೀವ್ರವಾಗಿ ಗಾಯಗೊಂಡಿರುವ ಭೀಕರ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಚಾಣಕನೂರು ಕ್ರಾಸ್ ಬಳಿ ಸಂಭವಿಸಿದೆ.

​ರಾವಿಹಾಳ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಂಜುಳ (36) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅವರ ಪತಿ, ಅದೇ ಆರೋಗ್ಯ ಕೇಂದ್ರದ ಸಿಬ್ಬಂದಿ ಚಂದ್ರಶೇಖರ್ (46) ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಪ್ರಸ್ತುತ ಬಳ್ಳಾರಿಯ ವಿಮ್ಸ್ (VIMS) ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

​ಮಂಜುಳ ಹಾಗೂ ಚಂದ್ರಶೇಖರ್ ದಂಪತಿ ಎಂದಿನಂತೆ ಆಸ್ಪತ್ರೆಯಲ್ಲಿ ತಮ್ಮ ರಾತ್ರಿ ಅವಧಿಯ ಕರ್ತವ್ಯವನ್ನು ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದರು. ರಾಜ್ಯ ಹೆದ್ದಾರಿ 63ರ ಚಾಣಕನೂರು ಕ್ರಾಸ್ ಬಳಿ ರಸ್ತೆ ಕಾಮಗಾರಿಗಾಗಿ ಜೆಸಿಬಿ ಮೂಲಕ ಬೃಹತ್ ಗುಂಡಿಯೊಂದನ್ನು ತೋಡಲಾಗಿತ್ತು. ಆದರೆ, ನಿಯಮಗಳ ಪ್ರಕಾರ ಕಾಮಗಾರಿ ನಡೆಸುವ ಸ್ಥಳದಲ್ಲಿ ಯಾವುದೇ ಮುನ್ನೆಚ್ಚರಿಕೆ ಅಥವಾ ಸೂಚನಾ ಫಲಕಗಳನ್ನು ಅಳವಡಿಸಿರಲಿಲ್ಲ. ರಾತ್ರಿಯ ಕತ್ತಲಲ್ಲಿ ಈ ಮೃತ್ಯುಕೂಪ ಗೋಚರಿಸದ ಕಾರಣ, ಚಲಿಸುತ್ತಿದ್ದ ಬೈಕ್ ನೇರವಾಗಿ ಗುಂಡಿಗೆ ಬಿದ್ದಿದೆ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಮಂಜುಳ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಉಡಾಫೆ ಪ್ರವೃತ್ತಿಯೇ ಈ ಸಾವಿಗೆ ನೇರ ಕಾರಣ. ಹೆದ್ದಾರಿ ಕಾಮಗಾರಿಗಳ ವೇಳೆ ಕನಿಷ್ಠ ಸುರಕ್ಷತಾ ನಿಯಮಗಳನ್ನೂ ಪಾಲಿಸದೆ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪು ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

​ಘಟನಾ ಸ್ಥಳಕ್ಕೆ ಸಿರುಗುಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತನಿಖೆ ಮುಂದುವರಿದಿದೆ.