



ಡೈಲಿವಾರ್ತೆ: 06/ಜೂ./2026


‘ಹಸು’ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಹಾವೇರಿಯಲ್ಲಿ ಮುಸ್ಲಿಂ ಸಮುದಾಯದ ಅಚ್ಚರಿಯ ಪ್ರತಿಭಟನೆ

ಹಾವೇರಿ, ಜೂನ್ 6: ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕುವ ಹಾಗೂ ಗೋಸಂರಕ್ಷಣೆಗೆ ಕಾನೂನಾತ್ಮಕ ಬಲ ತುಂಬುವ ಉದ್ದೇಶದಿಂದ ಹಸುವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಮುದಾಯದ ನೂರಾರು ಮಂದಿ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ವಿಶಿಷ್ಟ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ಕೇಂದ್ರವಾದ ಎಂ.ಜೆ. ಸರ್ಕಲ್‌ನಲ್ಲಿ ಅಂಜುಮನ್-ಎ-ಇಸ್ಲಾಂ ಸಮಿತಿಯ ಪದಾಧಿಕಾರಿಗಳು, ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಜಮಾಯಿಸಿ ತಮ್ಮ ಬೇಡಿಕೆಗಳನ್ನು ಮಂಡಿಸಿದರು.
ಪ್ರತಿಭಟನೆಯ ಬಳಿಕ ತಹಶೀಲ್ದಾರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜಂಟಿ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡರು, ದೇಶದ ಕೆಲವು ಭಾಗಗಳಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡು ನೈತಿಕ ಪೊಲೀಸ್‌ಗಿರಿ ನಡೆಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು. ಇಂತಹ ಘಟನೆಗಳು ಸಮಾಜದ ಸಾಮರಸ್ಯ ಮತ್ತು ಶಾಂತಿಗೆ ಧಕ್ಕೆ ತರುತ್ತಿದ್ದು, ಇದನ್ನು ತಡೆಯಲು ಸರ್ಕಾರ ಸ್ಪಷ್ಟ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಕೇಂದ್ರ ಸರ್ಕಾರ ಹಸುವನ್ನು ಅಧಿಕೃತವಾಗಿ ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿದರೆ, ಗೋಸಂರಕ್ಷಣೆಗೆ ಸರ್ಕಾರದ ಮಟ್ಟದಲ್ಲೇ ಹೆಚ್ಚಿನ ಮಹತ್ವ ಮತ್ತು ರಕ್ಷಣೆ ದೊರೆಯಲಿದೆ. ಜೊತೆಗೆ ಗೋವಿನ ಹೆಸರಿನಲ್ಲಿ ನಡೆಯುವ ಗಲಾಟೆಗಳು, ಸಂಘರ್ಷಗಳು ಹಾಗೂ ರಾಜಕೀಯ ದುರುಪಯೋಗಕ್ಕೂ ಕಡಿವಾಣ ಬೀಳಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಸಂರಕ್ಷಣೆಯ ವಿಷಯದಲ್ಲಿ ಮುಸ್ಲಿಂ ಸಮುದಾಯವೇ ಮುಂಚೂಣಿಗೆ ಬಂದು ಹಸುವಿನ ರಕ್ಷಣೆಗಾಗಿ ಧ್ವನಿ ಎತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು ಈ ಪ್ರತಿಭಟನೆ ರಾಜ್ಯಾದ್ಯಂತ ಗಮನ ಸೆಳೆದಿದೆ.
ಪ್ರತಿಭಟನೆಯಲ್ಲಿ ಅಂಜುಮನ್-ಎ-ಇಸ್ಲಾಂ ಸಮಿತಿಯ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಮುದಾಯದ ನೂರಾರು ಸದಸ್ಯರು ಭಾಗವಹಿಸಿದ್ದರು.