ಡೈಲಿವಾರ್ತೆ:26/ಅ./2026

ಬಂಟ್ವಾಳ: ಕುತ್ತಿಗೆಗೆ ಆಕಸ್ಮಿಕವಾಗಿ ಹಗ್ಗ ಸಿಲುಕಿ 9 ವರ್ಷದ ಬಾಲಕ ಸಾವು

ಬಂಟ್ವಾಳ: ಮನೆಯ ಎದುರಿನ ಹಾಲ್‌ನಲ್ಲಿ ಆಟವಾಡುತ್ತಿದ್ದ 9 ವರ್ಷದ ಬಾಲಕನ ಕುತ್ತಿಗೆಗೆ ಆಕಸ್ಮಿಕವಾಗಿ ಹಗ್ಗ ಸಿಲುಕಿ ಉಸಿರುಗಟ್ಟಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ಸಮೀಪ ಅ.25ರ ರಾತ್ರಿ ಸಂಭವಿಸಿದೆ.

ಮೃತ ಬಾಲಕನನ್ನು ಆನಂದ ಪೂಜಾರಿ ಅವರ ಪುತ್ರ ಅಮೃತ್ ಎ. ಪೂಜಾರಿ (9) ಎಂದು ಗುರುತಿಸಲಾಗಿದೆ.

ಅ.25ರ ರಾತ್ರಿ ಅಮೃತ್ ಮನೆಯ ಎದುರಿನ ಹಾಲ್‌ನಲ್ಲಿ ಒಬ್ಬನೇ ಆಟವಾಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮನೆಯ ಕಿಟಕಿಗೆ ಮೊದಲೇ ಸಿಕ್ಕಿಸಲಾಗಿದ್ದ ಹಗ್ಗವು ಆಕಸ್ಮಿಕವಾಗಿ ಬಾಲಕನ ಕುತ್ತಿಗೆಗೆ ಸಿಲುಕಿಕೊಂಡಿದೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಗಮನಕ್ಕೆ ಬಂದ ಕೂಡಲೇ ಬಾಲಕನಿಗೆ ಉಪಚಾರ ನೀಡಲು ಪ್ರಯತ್ನಿಸಲಾಯಿತು. ಆದರೆ, ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ತಕ್ಷಣವೇ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಾಲಕನನ್ನು ಪರೀಕ್ಷಿಸಿದ ವೈದ್ಯರು, ಆತ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 27/2026ರಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.