ಡೈಲಿವಾರ್ತೆ: 07/ಜೂ./2026

ಫೇಸ್‌ಬುಕ್‌ನಲ್ಲಿ ಗೃಹ ಸಚಿವರ ವಿರುದ್ಧ ಜಾತಿ ನಿಂದನೆ, ದ್ವೇಷಪೂರಿತ ಹೇಳಿಕೆ: ಎಸ್ಸಿ/ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕಾರ್ಕಳ ವ್ಯಕ್ತಿಯ ಸೆರೆ

ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಗೃಹ ಸಚಿವರ ವಿರುದ್ಧ ಅವಹೇಳನಕಾರಿ ಹಾಗೂ ದ್ವೇಷಪೂರಿತ ಕಾಮೆಂಟ್ ಮಾಡಿರುವ ಆರೋಪದಡಿ ಕಾರ್ಕಳ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ದೂರುದಾರ ಸುರೇಶ್ ಅವರು ನೀಡಿದ ದೂರಿನ ಪ್ರಕಾರ, ತಮ್ಮ ಫೇಸ್‌ಬುಕ್ ಖಾತೆ ವೀಕ್ಷಿಸುತ್ತಿದ್ದ ವೇಳೆ “NAMMA KARLA” ಎಂಬ ಫೇಸ್‌ಬುಕ್ ಪುಟದಲ್ಲಿ ರಾಜ್ಯದ ಗೃಹ ಸಚಿವರ ಕುರಿತಾದ ಪೋಸ್ಟ್‌ ಗೆ ಸುದೀರ್ ಬಂಗೇರ ಎಂಬಾತ ಅವಹೇಳನಕಾರಿ ಕಾಮೆಂಟ್ ಮಾಡಿರುವುದು ಗಮನಕ್ಕೆ ಬಂದಿದೆ. ಕಾಮೆಂಟ್‌ನಲ್ಲಿ ಸಚಿವರ ಜಾತಿಯನ್ನು ಉಲ್ಲೇಖಿಸಿ ನಿಂದನೆ ಮಾಡಿರುವುದಲ್ಲದೆ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಹಾಗೂ ವಿವಿಧ ಸಮುದಾಯಗಳ ನಡುವೆ ದ್ವೇಷ ಮತ್ತು ವೈರತ್ವ ಸೃಷ್ಟಿಸುವ ಉದ್ದೇಶವಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 82/2026ರಂತೆ ಭಾರತೀಯ ನ್ಯಾಯ &3 (BNS) 0 351(3), 196, 353 (2) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಕಲಂ 3(1)(r) ಮತ್ತು 3(1)(u) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಆರೋಪಿಯಾಗಿರುವ ಸುದೀರ್ ಬಂಗೇರ (48), ಭೋಜ ಬಂಗೇರ ಅವರ ಪುತ್ರ, ನಲ್ಕೆದಬೆಟ್ಟು, ಕೆರ್ವಾಶೆ ನಿವಾಸಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.