


ಡೈಲಿವಾರ್ತೆ: 25/ಜು./2026


ಭಾರೀ ಮಳೆಗೆ ಸಾಸ್ತಾನ – ಕೋಡಿ ಸಂಪರ್ಕ ಸೇತುವೆ ತಡೆಗೋಡೆ ಕುಸಿತ: ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ

ಕೋಟ, ಜು. 25: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಕೋಟ ಸಮೀಪದ ಸಾಸ್ತಾನದ ಐರೋಡಿ ಮತ್ತು ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಸಂಪರ್ಕಿಸುವ ಸೇತುವೆಯ ತಡೆಗೋಡೆ ಕುಸಿದಿದ್ದು, ಭಾರೀ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.

ಸುಮಾರು 50 ವರ್ಷಗಳಷ್ಟು ಹಳೆಯದಾದ ಈ ಸೇತುವೆಯ ತಡೆಗೋಡೆ ಸೀತಾನದಿ ನದಿಯ ನೀರಿನ ಒತ್ತಡದಿಂದ ಕುಸಿದಿದೆ. ಅಲ್ಲದೆ, ಸೇತುವೆಯ ಮಧ್ಯಭಾಗದ ರಸ್ತೆಯಲ್ಲಿಯೂ ಬಿರುಕು ಕಾಣಿಸಿಕೊಂಡಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
ಸೇತುವೆಯ ಹಾನಿಯಿಂದ ಭಾರೀ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸಾಮಾನ್ಯ ವಾಹನ ಸಂಚಾರವೂ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೋಡಿ ಗ್ರಾಮ ಪಂಚಾಯಿತಿ ಸಾರ್ವಜನಿಕರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ವಿಶೇಷವಾಗಿ ಭಾರೀ ವಾಹನಗಳು ಈ ಮಾರ್ಗದಲ್ಲಿ ಸಂಚರಿಸದಂತೆ ಗ್ರಾಮ ಪಂಚಾಯಿತಿ ನಿರ್ಬಂಧ ವಿಧಿಸಿದೆ. ಶಾಲಾ ವಾಹನಗಳು, ಆಟೋ ರಿಕ್ಷಾಗಳು ಹಾಗೂ ಇತರ ಸಣ್ಣ ವಾಹನಗಳು ಕೋಡಿ–ಗುಂಡ್ಮಿ ಸಂಪರ್ಕ ರಸ್ತೆಯ ಮೂಲಕ ಪರ್ಯಾಯ ಮಾರ್ಗವನ್ನು ಬಳಸುವಂತೆ ಪಂಚಾಯಿತಿ ಸೂಚಿಸಿದೆ.
ಸೇತುವೆಯ ಸ್ಥಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿದ್ದು, ಅಗತ್ಯ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಮಳೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.