ಡೈಲಿವಾರ್ತೆ: 10/ಜೂ./2026

​ಮದುವೆ ಭರವಸೆ ನೀಡಿ ಅತ್ಯಾಚಾರ ಆರೋಪ: ಬಿಜೆಪಿ ಮಾಜಿ ನಾಯಕನ ಪುತ್ರನಿಗೆ ಹೈಕೋರ್ಟ್ ತೀವ್ರ ತರಾಟೆ!

​ಬೆಂಗಳೂರು: ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಬಿಜೆಪಿ ಮಾಜಿ ನಾಯಕನ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಂತ್ರಸ್ತೆ ಹಾಗೂ ಆಕೆಯ ಹತ್ತು ತಿಂಗಳ ಮಗುವಿನ ಜೀವನ ನಿರ್ವಹಣೆಗೆ ಹಣ ಠೇವಣಿ ಇಡುವಂತೆ ನೀಡಿದ್ದ ಕೋರ್ಟ್ ಆದೇಶವನ್ನು ಪಾಲಿಸದ ಆರೋಪಿಯ ನಡವಳಿಕೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತೀವ್ರ ಅಸಮಾಧಾನ ಪ್ರಕಟಿಸಿದ್ದಾರೆ.

​ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಕೃಷ್ಣ ಜೆ. ರಾವ್ ಹಾಗೂ ಅವರ ಪೋಷಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರ ಬೇಜವಾಬ್ದಾರಿತನವನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿತು.

​‘ಕೆಳವರ್ಗದ ಮಗು ಎಂಬ ಕಾರಣಕ್ಕೆ ಕೈಬಿಡುತ್ತೀರಾ?’
​ವಿಚಾರಣೆ ವೇಳೆ ಗರಂ ಆದ ನ್ಯಾಯಮೂರ್ತಿಗಳು

​ಮಗು ಕೆಳ ವರ್ಗದ ಕುಟುಂಬದಲ್ಲಿ ಜನಿಸಿದೆ ಎಂಬ ಕಾರಣಕ್ಕೆ ಅದನ್ನು ಹಾಗೆಯೇ ಕೈಬಿಡುತ್ತಿದ್ದೀರಾ? ಇದನ್ನು ನ್ಯಾಯಾಲಯ ಎಂದಿಗೂ ಒಪ್ಪುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
​ಕಳೆದ ಏಪ್ರಿಲ್ 26ರಂದು ನೀಡಿದ್ದ ಮಧ್ಯಂತರ ಆದೇಶದ ಪ್ರಕಾರ, ಸಂತ್ರಸ್ತೆ ಮತ್ತು ಮಗುವಿನ ತುರ್ತು ನಿರ್ವಹಣೆಗಾಗಿ 75,000 ರೂಪಾಯಿಗಳನ್ನು ಒಂದು ವಾರದೊಳಗೆ ಠೇವಣಿ ಇಡಲು ಸೂಚಿಸಲಾಗಿತ್ತು. ಆದರೆ ಈ ಆದೇಶವನ್ನು ಪಾಲಿಸದೇ ಇರುವುದಕ್ಕೆ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

​ಜವಾಬ್ದಾರಿಯಿಂದ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ

​ಆರೋಪಿ ವಿದ್ಯಾರ್ಥಿಯಾಗಿದ್ದು, ಹಣ ಪಾವತಿಸಲು ಸಾಧ್ಯವಾಗಿಲ್ಲ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು 75,000 ರೂಪಾಯಿ ಕೊಡಲು ಸಾಧ್ಯವಾಗುತ್ತಿಲ್ಲವೇ? ನಿಮ್ಮ ತಂದೆ ಇದ್ದಾರಲ್ಲವೇ? ಹಣ ಪಾವತಿಸದಿದ್ದರೆ ಅರ್ಜಿಗಳನ್ನು ವಜಾಗೊಳಿಸಿ, ಮಧ್ಯಂತರ ಆದೇಶವನ್ನೂ ರದ್ದುಪಡಿಸುತ್ತೇನೆ. ನಿಮ್ಮ ಕೃತ್ಯದಿಂದ ಒಂದು ಮಗು ಜನಿಸಿದೆ, ಅದರ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.

​ಇದೇ ವೇಳೆ ಸಂತ್ರಸ್ತೆ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದು, ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ್ದರೂ ಆರೋಪಿ ಕಡೆಯಿಂದ ಹಣ ವರ್ಗಾವಣೆಯಾಗಿಲ್ಲ. ಮೇ 5ರಂದು ಮೊದಲ ಕಂತಿನ ಹಣವನ್ನು ಕೋರ್ಟ್‌ನಲ್ಲಿ ಠೇವಣಿ ಮಾಡಿದ್ದರೂ ಆ ವಿಷಯವನ್ನು ಸಂತ್ರಸ್ತೆಗೆ ತಿಳಿಸಿಲ್ಲ ಎಂದು ದೂರಿದರು.
​ಇದಕ್ಕೆ ಧ್ವನಿಗೂಡಿಸಿದ ನ್ಯಾಯಾಧೀಶರು,
​ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಿ. ಇದು ಕೇವಲ ಪರಸ್ಪರ ಸಮ್ಮತಿಯ ಸಂಬಂಧವಾಗಿದ್ದರೆ ಬೇರೆ ವಿಷಯವಾಗಿರುತ್ತಿತ್ತು. ಆದರೆ ಈ ಸಂಬಂಧದಿಂದ ಒಂದು ನಿರಪರಾಧಿ ಮಗು ಜನಿಸಿದೆ. ಈಗ ಆ ಮಗುವನ್ನು ಯಾವುದೇ ಆಧಾರವಿಲ್ಲದ ಸ್ಥಿತಿಯಲ್ಲಿ ಬಿಟ್ಟು ನೀವು ಜವಾಬ್ದಾರಿಯಿಂದ ಹೇಗೆ ಕೈತೊಳೆದುಕೊಳ್ಳುತ್ತೀರಿ? ಎಂದು ಪ್ರಶ್ನಿಸಿದರು.

​ಬಿಎನ್‌ಎಸ್ ಸೆಕ್ಷನ್ 69ರ ಅಡಿ ಸ್ಪಷ್ಟ ಪ್ರಕರಣ:


​ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿದ ಹೈಕೋರ್ಟ್, ಇದು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 69ರ ಅಡಿಯಲ್ಲಿ ಮದುವೆಯ ಸುಳ್ಳು ಭರವಸೆ ನೀಡಿ ವಂಚಿಸಿದ ಸ್ಪಷ್ಟ ಪ್ರಕರಣವಾಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಆದೇಶ ಉಲ್ಲಂಘನೆಯಾದರೆ ಎರಡೂ ಅರ್ಜಿಗಳನ್ನು ಖಂಡಿತವಾಗಿಯೂ ವಜಾಗೊಳಿಸಲಾಗುವುದು ಮತ್ತು ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿತು.
​ಆದಾಗ್ಯೂ, ಪ್ರಕರಣದ ಮೂಲ ವಿಷಯಗಳ ಕುರಿತು ವಾದ ಮಂಡಿಸಲು ಅರ್ಜಿದಾರರಿಗೆ ಕೊನೆಯ ಅವಕಾಶ ನೀಡಿ ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿದೆ ಎಂದು ‘ಬಾರ್ ಆ್ಯಂಡ್ ಬೆಂಚ್’ ವರದಿ ಮಾಡಿದೆ.