


ಡೈಲಿವಾರ್ತೆ:17/ಆಗಸ್ಟ್ /2026

ಕೊಡಚಾದ್ರಿಯಲ್ಲಿ 60 ಅಡಿ ಆಳಕ್ಕೆ ಬಿದ್ದ ಪ್ರವಾಸಿಗ: ಜೀವದ ಹಂಗು ತೊರೆದು ರಕ್ಷಿಸಿದ ಜೀಪ್ ಚಾಲಕರು!

ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೊಡಚಾದ್ರಿ ಬೆಟ್ಟದಲ್ಲಿ ತಲೆಸುತ್ತಿನಿಂದ ಆಯತಪ್ಪಿ ಸುಮಾರು 60 ಅಡಿ ಆಳಕ್ಕೆ ಬಿದ್ದ ಪ್ರವಾಸಿಗನನ್ನು ಸ್ಥಳೀಯ ಜೀಪ್ ಚಾಲಕರು ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ನಡೆದಿದೆ.
ಗಾಯಗೊಂಡ ಪ್ರವಾಸಿಗ ಕುಮುಟಾ ಮೂಲದ ಪ್ರದೀಪ್ ಎಂದು ಗುರುತಿಸಲಾಗಿದೆ. ಪ್ರದೀಪ್ ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದ ಅವರು ಶಂಕರಾಚಾರ್ಯ ಪೀಠದ ಸಮೀಪ ತೆರಳುತ್ತಿದ್ದ ವೇಳೆ ತಲೆಸುತ್ತಿನಿಂದ ಆಯತಪ್ಪಿ ಬೆಟ್ಟದ ಕೆಳಭಾಗಕ್ಕೆ60 ಅಡಿ ಆಳಕ್ಕೆಬಿದ್ದಿದ್ದಾರೆ.
ಘಟನೆಯನ್ನು ಗಮನಿಸಿದ ಪ್ರವಾಸಿಗರು ತಕ್ಷಣ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೊಲ್ಲೂರು, ನಿಟ್ಟೂರು ಹಾಗೂ ಸಂಪೆಕಟ್ಟೆ ಭಾಗದ ಪ್ರವಾಸಿ ಜೀಪ್ ಚಾಲಕರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದಾರೆ.ಕಠಿಣ ಹಾಗೂ ಅಪಾಯಕಾರಿ ಬೆಟ್ಟ ಪ್ರದೇಶವಾಗಿದ್ದರೂ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ಜೀಪ್ ಚಾಲಕರು, ಸುಮಾರು 60 ಅಡಿ ಕೆಳಗೆ ಬಿದ್ದಿದ್ದ ಪ್ರದೀಪ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಗಾಯಗೊಂಡ ಅವರನ್ನು ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರದೀಪ್ ಅವರ ತಲೆ, ಕೈ ಹಾಗೂ ಕಾಲು ಭಾಗಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.