ಡೈಲಿವಾರ್ತೆ: 13/ಜೂ./2026

ಮಣಿಪಾಲ: ನಿರಂತರ ಮಾದಕ ವಸ್ತು ಜಾಲದಲ್ಲಿ ಭಾಗಿ – ಕುಖ್ಯಾತ ಪೆಡ್ಲರ್ ಜಗದೀಶ ಪೂಜಾರಿ ಬಂಧನ

​ಉಡುಪಿ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ರಾಜೀವನಗರದ ನಿವಾಸಿ ಜಗದೀಶ ಪೂಜಾರಿ (33) ಎಂಬಾತನನ್ನು ಪೊಲೀಸರು ಪ್ರಮುಖ ಕಾಯ್ದೆಯಾದ PIT-NDPS (ಅಕ್ರಮ ಮಾದಕ ದ್ರವ್ಯ ವ್ಯವಹಾರ ತಡೆ ಕಾಯ್ದೆ) ಅಡಿಯಲ್ಲಿ ಬಂಧಿಸಿದ್ದಾರೆ.

​ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು (SP) ನೀಡಿದ ಸುದೀರ್ಘ ಹಾಗೂ ವಿವರವಾದ ವರದಿಯನ್ನು ಪರಿಶೀಲಿಸಿದ ಪಶ್ಚಿಮ ವಲಯ ಮಂಗಳೂರು ಪೊಲೀಸ್‌ ಮಹಾನಿರೀಕ್ಷಕರು (IGP) ಆರೋಪಿಯ ವಿರುದ್ಧ ಕಠಿಣ ಬಂಧನ ಆದೇಶ ಹೊರಡಿಸಿದ್ದರು. ಈ ಆದೇಶದನ್ವಯ ಜೂನ್ 12ರಂದು ಮಣಿಪಾಲ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

​ಬಂಧಿತ ಜಗದೀಶ ಪೂಜಾರಿ ಕೇವಲ ಮಾರಾಟಗಾರನಲ್ಲದೆ, ಮಾದಕ ದ್ರವ್ಯ ವ್ಯಸನಿಯೂ ಆಗಿದ್ದು, ಈತನ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ಮಣಿಪಾಲ ಪೊಲೀಸ್‌ ಠಾಣೆ ಹಾಗೂ ಸೆನ್ (CEN) ಅಪರಾಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 3 ಗಂಭೀರ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಒಂದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದರೆ, ಉಳಿದ ಎರಡು ಪ್ರಕರಣಗಳು ಪ್ರಸ್ತುತ ತನಿಖಾ ಹಂತದಲ್ಲಿವೆ.
ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ಈತನ ವಿರುದ್ಧ 2 ಪ್ರಕರಣಗಳು ದಾಖಲಾಗಿದ್ದು, ಇವೆರಡೂ ಪ್ರಕರಣಗಳಲ್ಲಿ ನ್ಯಾಯಾಲಯವು ಆರೋಪಿಗೆ ಈಗಾಗಲೇ ಶಿಕ್ಷೆ ವಿಧಿಸಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

​ಕಲಬುರ್ಗಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್:
​ಜಾಮೀನಿನ ಮೇಲೆ ಹೊರಬಂದು ಪದೇ ಪದೇ ಸಮಾಜದ ಸ್ವಾಸ್ಥ್ಯ ಕೆಡಿಸುವ ಹಾಗೂ ಯುವ ಪೀಳಿಗೆಯನ್ನು ಮಾದಕ ದ್ರವ್ಯ ಜಾಲಕ್ಕೆ ತಳ್ಳುವ ಇಂತಹ ಪುನರಾವರ್ತಿತ ಅಪರಾಧಿಗಳ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಕಠಿಣ ಕಾನೂನು ಜಾರಿಯ ಉದ್ದೇಶದಿಂದ ಆರೋಪಿಯನ್ನು ಪಿ.ಐ.ಟಿ.-ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿದ್ದು, ಆತನನ್ನು ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.