ಡೈಲಿವಾರ್ತೆ: 29/ನ./2026

ಬ್ರಹ್ಮಾವರ: ಉಪ್ಪೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 8 ಕ್ವಿಂಟಾಲ್‌ಗೂ ಅಧಿಕ ಪಡಿತರ ಅಕ್ಕಿ ವಶ!
ಓಮಿನಿ ವಾಹನ ಸಹಿತ ₹1.21 ಲಕ್ಷ ಮೌಲ್ಯದ ಸೊತ್ತುಗಳ ಜಪ್ತಿ; ಪೊಲೀಸರನ್ನು ಕಂಡು ಚಾಲಕ ಪರಾರಿ

ಬ್ರಹ್ಮಾವರ: ಸರಕಾರದ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸಲಾಗುವ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬ್ರಹ್ಮಾವರ ಪೊಲೀಸರು ಪತ್ತೆಹಚ್ಚಿದ್ದಾರೆ. ಉಪ್ಪೂರು ಗ್ರಾಮದ ಜಾತಬೆಟ್ಟು ಎಂಬಲ್ಲಿ ಓಮಿನಿ ವಾಹನದಲ್ಲಿ ಸಾಗಿಸಲಾಗುತ್ತಿದ್ದ 8 ಕ್ವಿಂಟಾಲ್‌ 21 ಕೆ.ಜಿ. ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ನ. 28ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಜಾತಬೆಟ್ಟು ಎಂಬಲ್ಲಿ ಓಮಿನಿ ವಾಹನದಲ್ಲಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬ್ರಹ್ಮಾವರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ವಾಹನದಲ್ಲಿದ್ದ ಚಾಲಕ ಪೊಲೀಸರನ್ನು ಕಂಡು ವಾಹನವನ್ನು ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಬಳಿಕ ಆಹಾರ ನಿರೀಕ್ಷಕ ಬಿ. ಶರತ್ ಶೆಟ್ಟಿ (44) ಅವರು ಠಾಣೆಗೆ ಆಗಮಿಸಿ, ಪಂಚರ ಸಮಕ್ಷಮ ವಾಹನವನ್ನು ಪರಿಶೀಲಿಸಿದಾಗ, ಮಾರುತಿ ಸುಜುಕಿ ಕಂಪನಿಯ KA-20-C-1287 ನೋಂದಣಿ ಸಂಖ್ಯೆಯ ಓಮಿನಿ ವಾಹನದಲ್ಲಿ 29 ಚೀಲಗಳಲ್ಲಿ ಒಟ್ಟು 8 ಕ್ವಿಂಟಾಲ್‌ 21 ಕೆ.ಜಿ. ಅಕ್ಕಿ ಪತ್ತೆಯಾಗಿದೆ.

ಪತ್ತೆಯಾದ ಅಕ್ಕಿಯು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅನ್ನಭಾಗ್ಯ ಯೋಜನೆಯ ಮೂಲಕ ಸರಕಾರವು ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಅಕ್ಕಿ ಎಂಬುದು ಪ್ರಾಥಮಿಕ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಅಕ್ಕಿಯ ಅಂದಾಜು ಮೌಲ್ಯ ₹19,704, ಓಮಿನಿ ವಾಹನದ ಮೌಲ್ಯ ₹1 ಲಕ್ಷ ಹಾಗೂ ವಾಹನದಲ್ಲಿದ್ದ ತೂಕದ ಯಂತ್ರದ ಮೌಲ್ಯ ₹2 ಸಾವಿರ ಎಂದು ಅಂದಾಜಿಸಲಾಗಿದೆ.
ಪಂಚರ ಸಮಕ್ಷಮ ಮಹಜರು ನಡೆಸಿದ ಪೊಲೀಸರು, ಅಕ್ಕಿ, ತೂಕದ ಯಂತ್ರ ಹಾಗೂ ವಾಹನ ಸೇರಿದಂತೆ ಒಟ್ಟು ₹1,21,704 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 218/2026ರಂತೆ ಅಗತ್ಯ ವಸ್ತುಗಳ ಕಾಯ್ದೆ (EC Act) ಕಲಂ 3, 7 ಹಾಗೂ ಪಡಿತರ ನಿಯಂತ್ರಣ ಆದೇಶ 2016ರ ಕಲಂ 3(2), 18(1)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.