ಡೈಲಿವಾರ್ತೆ: 29/11/2026

ಕೋಟೇಶ್ವರ ಗುರುಕುಲದಲ್ಲಿ ಕಲಾ ವೈಭೋಗಂ 21ನೇ ವಾರ್ಷಿಕೋತ್ಸವ ಸಂಭ್ರಮ:
ಶಿಕ್ಷಣದಲ್ಲಿ ಸಂಸ್ಕಾರ, ಮೌಲ್ಯ ಹಾಗೂ ಕ್ರೀಡೆಗೂ ಆದ್ಯತೆ ಅಗತ್ಯ: ಡಾ. ಜಯಕರ್ ಶೆಟ್ಟಿ

ಕುಂದಾಪುರ: ಶಿಕ್ಷಣವೆಂದರೆ ಕೇವಲ ಅಂಕ ಗಳಿಸಿ ಉದ್ಯೋಗ ಪಡೆಯುವುದಲ್ಲ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ, ಸಾಮಾಜಿಕ ಜವಾಬ್ದಾರಿ, ಪರಿಸರ ಪ್ರಜ್ಞೆ ಹಾಗೂ ಕ್ರೀಡಾಸ್ಫೂರ್ತಿ ಬೆಳೆಸುವುದೇ ನಿಜವಾದ ಶಿಕ್ಷಣದ ಉದ್ದೇಶ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಜಯಕರ್ ಶೆಟ್ಟಿ ಹೇಳಿದರು.

ಅವರು ನ. 28ರಂದು ಕುಂದಾಪುರದ ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಗುರುಕುಲ ಪದವಿಪೂರ್ವ ಕಾಲೇಜಿನ 21ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಕಲಾ ವೈಭೋಗಂ-2026’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯನ್ನು ಉಲ್ಲೇಖಿಸಿದ ಅವರು, ಶಿಕ್ಷಣವು ಮಕ್ಕಳಲ್ಲಿ ವಿಶಾಲ ದೃಷ್ಟಿಕೋನ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ವಿದ್ಯಾರ್ಥಿಗಳನ್ನು ಕೇವಲ ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡದೆ, ಜ್ಞಾನ ಮತ್ತು ಸಂಸ್ಕಾರ ಹೊಂದಿದ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದರು.
ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ನಡವಳಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಪೋಷಕರು ಮಾದರಿಯಾಗಿರಬೇಕು. ಶೈಕ್ಷಣಿಕ ಸಾಧನೆಯೊಂದಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ಸಮಾನ ಆದ್ಯತೆ ನೀಡಬೇಕು. ಇವು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಹಕಾರ, ಆತ್ಮವಿಶ್ವಾಸ ಮತ್ತು ಸಮಸ್ಯೆ ಎದುರಿಸುವ ಸಾಮರ್ಥ್ಯ ಬೆಳೆಸುತ್ತವೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಿದ ಅವರು, ಸ್ವಚ್ಛತೆ ಕಾಪಾಡುವುದು ಹಾಗೂ ಪ್ರಾಣಿ-ಪಕ್ಷಿಗಳ ಬದುಕುವ ಹಕ್ಕನ್ನು ಗೌರವಿಸುವ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದು ಜಯಕರ್ ಶೆಟ್ಟಿ ಕರೆ ನೀಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ಆಡಳಿತ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಮಾತನಾಡಿ, ಮಕ್ಕಳನ್ನು ವೈದ್ಯರು, ಎಂಜಿನಿಯರ್‌ಗಳು ಅಥವಾ ಉನ್ನತ ಹುದ್ದೆಗಳಿಗೆ ತಲುಪಿಸುವುದಷ್ಟೇ ಪೋಷಕರ ಗುರಿಯಾಗಬಾರದು. ಅವರಲ್ಲಿ ಉತ್ತಮ ಜೀವನ ಮೌಲ್ಯ, ಆತ್ಮವಿಶ್ವಾಸ ಹಾಗೂ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸುವುದು ಮುಖ್ಯ ಎಂದರು.

ಸಂಸ್ಥೆಯ ಸಂಸ್ಥಾಪಕ ಪೂಜ್ಯ ಅಪ್ಪಣ್ಣ ಹೆಗ್ಡೆ ಯವರ ಕನಸಿನಂತೆ ಭಾರತೀಯ ಪರಂಪರೆಯೊಂದಿಗೆ ಆಧುನಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ 2006ರಲ್ಲಿ ಸಂಸ್ಥೆ ಆರಂಭಗೊಂಡಿದೆ. ಇಂದು ಇಲ್ಲಿನ ವಿದ್ಯಾರ್ಥಿಗಳು ವೈದ್ಯರು, ಸೈನಿಕರು, ಪ್ರಾಧ್ಯಾಪಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಂಸ್ಥೆ ಆದ್ಯತೆ ನೀಡುತ್ತಿದೆ ಎಂದು ಹೇಳಿದ ಅವರು ಪೋಷಕರು ಮಕ್ಕಳ ಅಂಕಗಳಿಗಷ್ಟೇ ಮಹತ್ವ ನೀಡದೆ, ಅವರ ಮಾನಸಿಕ ಸ್ಥಿತಿ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಮಕ್ಕಳು ಪೋಷಕರು ಹಾಗೂ ಶಿಕ್ಷಕರ ನಡವಳಿಕೆಯಿಂದ ಪ್ರಭಾವಿತರಾಗುವುದರಿಂದ ಪೋಷಕರು ಉತ್ತಮ ಮಾದರಿಯಾಗಬೇಕು. ಮಕ್ಕಳ ಸಮಸ್ಯೆಗಳನ್ನು ಶಿಕ್ಷಕರೊಂದಿಗೆ ಹಂಚಿಕೊಂಡು, ಅವರಲ್ಲಿ ಆತ್ಮವಿಶ್ವಾಸ ತುಂಬಿ ಉತ್ತಮ ಭವಿಷ್ಯ ರೂಪಿಸಲು ಸಹಕರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ದಿವ್ಯಾತ್ಮ ಬಸ್ರೂರು ಬಿ.ಅಪ್ಪಣ್ಣ ಹೆಗ್ಡೆಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಅಲ್ಲದೆ ದಿ. ಬಸ್ರೂರು ಶ್ರೀ ಅಪ್ಪಣ್ಣ ಹೆಗ್ಡೆಯವರ ಜೀವನ ಕ್ರಮಕ್ಕೆ ಆಧರಿಸಿದ ಸಾಕ್ಷ್ಯಚಿತ್ರವನ್ನು ವೀಕ್ಷಿಸಿಲಾಯಿತು.

ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲಾದ ಶ್ರೀ ಸಂದೀಪ್ ನಾಯ್ಕ್ ರವರು ಅನುಕ್ರಮವಾಗಿ ವಾರ್ಷಿಕ ವರದಿಯನ್ನು ವಾಚಿಸಿದರು.

2025- 26ನೇ ಸಾಲಿನ ಶೈಕ್ಷಣಿಕವಾಗಿ ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿ ಡಾ.ಜಯಕರಶೆಟ್ಟಿ ಯವರನ್ನು ಸಂಸ್ಥೆಯ ವತಿಯಿಂದ ಗೌರವದಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ಆಡಳಿತ ಟ್ರಸ್ಟಿಗಳಾದ ಸುಭಾಷ್ ಚಂದ್ರ ಶೆಟ್ಟಿ, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಡಾ. ರೂಪಾ ಶಣೈ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ನಾಯಕ್ ಬಿ., ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಜಿ. ಪ್ರಥಮ್ ಕುಮಾರ್ ಮತ್ತು ಕು.ಪ್ರಣಮ್ಯ ವಿ.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಝಾರಾ ಎಂ. ಇಮ್ರಾನ್ ದಿ. ಶ್ರೀ ಅಪ್ಪಣ್ಣ ಹೆಗ್ಡೆಯವರ ಕುರಿತು ಮಾತನಾಡಿದರು.
ಕು. ಶ್ರಾವ್ಯ ವಿ. ಉಪಾಧ್ಯಾಯ ಸ್ವಾಗತಿಸಿದರು. ಕು. ಕೀರ್ತನ ಪಿ ಅತಿಥಿಯವರನ್ನು ಪರಿಚಯಿಸಿದರು.
ಋತ್ವ ಆರ್.ಶೆಟ್ಟಿ. ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಗುರುಕುಲ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.