ಡೈಲಿವಾರ್ತೆ: 19/ಜೂ./2026

ಕೋಡಿ ಕನ್ಯಾಣ ಬೀಚ್‌ನಲ್ಲಿ ದುರಂತ: ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಯುವಕ ನೀರಿನ ಸೆಳೆತಕ್ಕೆ ಬಲಿ!

​ಕೋಟ: ಕರಾವಳಿ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ಯುವಕನೋರ್ವ ಸಮುದ್ರದಲ್ಲಿ ಈಜಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಕಡಲತೀರದಲ್ಲಿ ಇಂದು (ಜೂನ್ 19, ಶುಕ್ರವಾರ) ಬೆಳಿಗ್ಗೆ ಸಂಭವಿಸಿದೆ.

​ಬೆಂಗಳೂರು ರಾಜಾಜಿ ನಗರದ ನಿಖಿಲ್ ಕುಮಾರ್ (32) ಮೃತಪಟ್ಟ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ.

​ಘಟನೆಯ ವಿವರ:
ರಾಜಧಾನಿ ಬೆಂಗಳೂರಿನಿಂದ ಕರಾವಳಿ ಪ್ರವಾಸ ಕೈಗೊಂಡಿದ್ದ 9 ಮಂದಿ ಯುವಕರ ತಂಡವೊಂದು ಇಂದು ಬೆಳಿಗ್ಗೆ ಕೋಡಿ ಕನ್ಯಾಣ ಸಮುದ್ರ ತೀರಕ್ಕೆ ಭೇಟಿ ನೀಡಿತ್ತು. ಈ ಪೈಕಿ ನಾಲ್ವರು ಯುವಕರು ಸಮುದ್ರದಲ್ಲಿ ಸ್ನಾನ ಮಾಡಲೆಂದು ನೀರಿಗೆ ಇಳಿದಿದ್ದಾರೆ.
ಈ ಸಂದರ್ಭದಲ್ಲಿ ಅಲೆಗಳ ತೀವ್ರತೆಗೆ ಸಿಲುಕಿದ ನಿಖಿಲ್, ನೀರಿನ ಭಾರಿ ಸೆಳೆತಕ್ಕೆ ಸಿಲುಕಿ ಸಮುದ್ರದ ಒಳಕ್ಕೆ ಕೊಚ್ಚಿ ಹೋಗಿದ್ದಾರೆ.


​ಸ್ಥಳೀಯರ ತಕ್ಷಣದ ರಕ್ಷಣಾ ಕಾರ್ಯಾಚರಣೆ:
ಯುವಕ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ದೋಣಿಯ ಮೂಲಕ ಸಮುದ್ರದೊಳಗೆ ತೆರಳಿ ಯುವಕನನ್ನು ರಕ್ಷಿಸಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣವೇ ಜೀವನ್ ಮಿತ್ರ ಆಂಬುಲೆನ್ಸ್ ನಾಗರಾಜ್ ಪುತ್ರನ್ ಹಾಗೂ ಕಿಶೋರ್ ಶೆಟ್ಟಿ ಅವರು ಸ್ಥಳೀಯರ ಸಹಕಾರದೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಿಖಿಲ್‌ನನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಯುವಕನನ್ನು ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

​ಘಟನಾ ಸ್ಥಳಕ್ಕೆ ಕೋಟ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.