ಡೈಲಿವಾರ್ತೆ: 21/ಜೂ./2026

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನಿಂದ 20 ಸಾವಿರ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ: ಕನ್ನಡ ಶಾಲೆಗಳ ಉಳಿವಿಗಾಗಿ ಕಾನೂನು ಹೋರಾಟ ಅಗತ್ಯ – ಡಾ. ಎಚ್.ಎಸ್. ಶೆಟ್ಟಿ

ಉಡುಪಿ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲಾ ಅನುದಾನಿತ ಶಾಲಾ ಸಂಘಗಳ ಸಹಕಾರದೊಂದಿಗೆ ಜಿಲ್ಲೆಯ 200 ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 20,000 ಜೊತೆ ಉಚಿತ ಶಾಲಾ ಸಮವಸ್ತ್ರ ವಿತರಣೆ, ವೆಬ್‌ಸೈಟ್ ಅನಾವರಣ ಹಾಗೂ ‘ವಿದ್ಯಾಪೋಷಕ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜೂನ್ 20ರಂದು ಉಡುಪಿಯ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರುಗಿತು.

​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಮಾನವ ಹಕ್ಕು ಹೋರಾಟಗಾರ ಡಾ. ರವೀಂದ್ರನಾಥ ಶಾನುಭಾಗ್ ಸಂವಿಧಾನದ ಪ್ರಕಾರ ಜನಪ್ರತಿನಿಧಿಗಳು ಕಣ್ಣೀರು ಒರೆಸಬೇಕಾದ ಸಾರ್ವಜನಿಕ ಸೇವಕರು. ಆದರೆ ಇಂದು ಬಡವರು ಮತ್ತು ಶೋಷಿತರು ನ್ಯಾಯಕ್ಕಾಗಿ ಬೀದಿ ಪಾಲಾಗುತ್ತಿರುವುದು ವ್ಯವಸ್ಥೆಯ ಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೊರಗ ಸಮುದಾಯದ ವಸತಿ ಸಮಸ್ಯೆ, ಬೀದಿ ನಾಯಿಗಳ ನಿಯಂತ್ರಣದಲ್ಲಿನ ವೈಫಲ್ಯ ಹಾಗೂ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಬಡ ಮಹಿಳೆಯರಿಗೆ ನ್ಯಾಯ ನೀಡಲು ಸತಾಯಿಸಿದ ಅಧಿಕಾರಿಗಳ ಧೋರಣೆಯನ್ನು ಅವರು ಕಟುವಾಗಿ ಟೀಕಿಸಿದರು. ಅಲ್ಲದೆ, ಅನ್ಯಾಯದ ವಿರುದ್ಧ ಹೋರಾಡುವ ಛಲವನ್ನು ಯುವ ಪೀಳಿಗೆ ಹಾಗೂ ಶಿಕ್ಷಕರು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

​ಟ್ರಸ್ಟ್‌ನ ಪ್ರವರ್ತರಾದ ಡಾ. ಹೆಚ್.ಎಸ್. ಶೆಟ್ಟಿ ಮಾತನಾಡಿ, ಜಾಗತಿಕ ಬಿಕ್ಕಟ್ಟುಗಳ ಮಧ್ಯೆಯೂ ಸಂಸ್ಥೆಯು ಕಳೆದ 18 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು. ನೈಜ ಕನ್ನಡ ಶಾಲೆಗಳಾಗಿರುವ ಅನುದಾನಿತ ಶಾಲೆಗಳು ಇಂದು ಮುಚ್ಚಿಹೋಗುವ ಭೀತಿಯಲ್ಲಿವೆ. ಸರ್ಕಾರವಾಗಲಿ, ಮಠ-ಮಾನ್ಯಗಳಾಗಲಿ ಇವುಗಳ ಉಳಿವಿಗಾಗಿ ಗಂಭೀರ ಆಸಕ್ತಿ ತೋರುತ್ತಿಲ್ಲ. ಈ ಶಾಲೆಗಳ ಉಳಿವಿಗಾಗಿ ನಡೆಯುವ ಹೋರಾಟಕ್ಕೆ ನಾವು ಕಾನೂನಾತ್ಮಕವಾಗಿ ಧ್ವನಿಗೂಡಿಸಲು ಸಿದ್ಧರಿದ್ದೇವೆ ಎಂದು ಕಳಕಳಿ ವ್ಯಕ್ತಪಡಿಸಿದರು. ಪಠ್ಯದಲ್ಲಿಲ್ಲದ ವೀರ ವನಿತೆಯರ ಇತಿಹಾಸ ಹಾಗೂ ವಿಜ್ಞಾನಿ ಪ್ರೊ. ಯು.ಆರ್. ರಾವ್ ಅವರ ಸಾಧನೆಗಳನ್ನು ಮಕ್ಕಳಿಗೆ ಬೋಧಿಸುವಂತೆ ಅವರು ಶಿಕ್ಷಕರಿಗೆ ಕರೆ ನೀಡಿದರು.

​ಇದೇ ಸಂದರ್ಭದಲ್ಲಿ ‘ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ಎನ್. ನರೇಂದ್ರ ರೈ ದೇರ್ಲ, ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಸಂವೇದನೆ ಬತ್ತಿ ಹೋಗುತ್ತಿದ್ದು, ಅವರ ಮನಸ್ಸಿನಿಂದ ಯಂತ್ರಗಳನ್ನು ಕಳಚಿ ಮನುಷ್ಯತ್ವ ತುಂಬುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಪರಿಸರ ಮಾಲಿನ್ಯದ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಮುಂದಿನ ಪೀಳಿಗೆಗೆ ಭೂಮಿಯನ್ನು ಸುಸ್ಥಿರವಾಗಿ ಉಳಿಸುವುದೇ ನಿಜವಾದ ಸಂಸ್ಕೃತಿ ಎಂದು ಪ್ರತಿಪಾದಿಸಿದರು.

​ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಸರ್ಕಾರ ಮಾಡಬೇಕಾದ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕಾರ್ಯಗಳನ್ನು ಉದ್ಯಮಿ ಎಚ್.ಎಸ್. ಶೆಟ್ಟಿಯವರು ತಮ್ಮ ಸ್ವಂತ ಗಳಿಕೆಯಿಂದ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದಲ್ಲಿ ಮುಂದಿನ ವರ್ಷ ಸುಮಾರು 7,000 ಸರ್ಕಾರಿ ಶಾಲೆಗಳು ಮುಚ್ಚುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೆ, ಮೀಸಲಾತಿ ವ್ಯವಸ್ಥೆಯು ಅರ್ಹತೆ ಮತ್ತು ಸಾಮಾಜಿಕ ಸಮಾನತೆ ಎರಡನ್ನೂ ಸಮತೋಲನಗೊಳಿಸುವ ಅಗತ್ಯತೆಯ ಕುರಿತು ವಿಶ್ಲೇಷಿಸಿದರು.

​ಕಾರ್ಯಕ್ರಮದ ವೇದಿಕೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಟ್ರಸ್ಟ್ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್, ಜಿಲ್ಲಾ ಅನುದಾನಿತ ಪ್ರೌಢಶಾಲೆಗಳ ನೌಕರರ ಸಂಘದ ಅಧ್ಯಕ್ಷ ಡಾ. ಜಯಶೀಲ ಶೆಟ್ಟಿ ಕಂದಾವರ ಹಾಗೂ ಜಿಲ್ಲಾ ಪ್ರಾಥಮಿಕ ಅನುದಾನಿತ ಶಾಲಾ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು.
​ಪುರೋಹಿತ್ ದಾಮೋದರ ಶರ್ಮಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.