


ಡೈಲಿವಾರ್ತೆ: 22/ಜೂ./2026


ಬ್ರಹ್ಮರಕೂಟ್ಲು ಟೋಲ್‌ನಲ್ಲಿ ರಾಜಕೀಯ ಕಾರ್ಯಕರ್ತರ ದಾಂಧಲೆ: ಟೋಲ್ ತಪ್ಪಿಸಲು ಬ್ಯಾರಿಯರ್ ಧ್ವಂಸ, ಒನ್-ವೇನಲ್ಲಿ ವಾಹನ ನುಗ್ಗಿಸಿ ಗೂಂಡಾವರ್ತನೆ!

ಮಂಗಳೂರು, ಜೂ.22: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ರಾಜಕೀಯ ಕಾರ್ಯಕರ್ತರ ಉದ್ಧಟ ವರ್ತನೆ ಮತ್ತು ಸಾರ್ವಜನಿಕ ಆಸ್ತಿಯ ಮೇಲಿನ ದಾಂಧಲೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಟೋಲ್ ಶುಲ್ಕ ಪಾವತಿಸುವುದನ್ನು ತಪ್ಪಿಸಲು ನಿಯಮಗಳನ್ನು ಧಿಕ್ಕರಿಸಿದ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಹಾಗೂ ವಾಹನ ಚಾಲಕರು ಟೋಲ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, ಬಳಿಕ ಸುರಕ್ಷತಾ ಬ್ಯಾರಿಯರ್‌ಗಳನ್ನು ಧ್ವಂಸಗೊಳಿಸಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಲಭ್ಯ ಮಾಹಿತಿಯ ಪ್ರಕಾರ, ಸಿಪಿಐಎಂ ಪಕ್ಷದ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಬ್ರಹ್ಮರಕೂಟ್ಲು ಟೋಲ್ ಗೇಟ್‌ಗೆ ಆಗಮಿಸಿತ್ತು. ಕರ್ತವ್ಯದಲ್ಲಿದ್ದ ಟೋಲ್ ಸಿಬ್ಬಂದಿ ನಿಯಮಾನುಸಾರ ವಾಹನವನ್ನು ತಡೆದು ಶುಲ್ಕ ಪಾವತಿಸುವಂತೆ ಸೂಚಿಸಿದಾಗ, ಬಸ್ ಚಾಲಕ ಹಾಗೂ ವಾಹನದಲ್ಲಿದ್ದ ಕಾರ್ಯಕರ್ತರು ಟೋಲ್ ಪಾವತಿಸಲು ನಿರಾಕರಿಸಿ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಚಾಲಕ ಬಸ್ ಅನ್ನು ವೇಗವಾಗಿ ಚಲಾಯಿಸಿ ಟೋಲ್ ಗೇಟ್‌ನ ಸುರಕ್ಷತಾ ಬೂಮ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಅದನ್ನು ಸಂಪೂರ್ಣವಾಗಿ ಜಖಂಗೊಳಿಸಿ ಅಲ್ಲಿಂದ ತೆರಳಿದ್ದಾನೆ. ಇದಾದ ಬಳಿಕ ಕಾರ್ಯಕರ್ತರಿದ್ದ ಇನ್ನೂ ಹಲವು ವಾಹನಗಳು ಕೂಡ ಇದೇ ಮಾದರಿಯಲ್ಲಿ ಟೋಲ್ ಗೇಟ್‌ನ್ನು ಬಲವಂತವಾಗಿ ದಾಟಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಆರೋಪ ಕೇಳಿಬಂದಿದೆ.
ಘಟನೆಯ ವೇಳೆ ಕೆಲವು ವಾಹನಗಳು ನಿಯಮ ಉಲ್ಲಂಘಿಸಿ ಏಕಮುಖ ಸಂಚಾರ ಮಾರ್ಗದಲ್ಲಿಯೇ ಪ್ರವೇಶಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಟೋಲ್ ಸಿಬ್ಬಂದಿಯ ಎಚ್ಚರಿಕೆಗಳನ್ನು ಲೆಕ್ಕಿಸದೇ ಕಾರ್ಯಕರ್ತರು ನಡೆಸಿದ ಈ ವರ್ತನೆ ಹೆದ್ದಾರಿ ಸಂಚಾರ ಸುರಕ್ಷತೆಗೆ ಧಕ್ಕೆ ಉಂಟುಮಾಡಿದೆ ಎಂದು ಹೇಳಲಾಗಿದೆ.
ಇಡೀ ಘಟನೆ ಟೋಲ್ ಪ್ಲಾಜಾದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಸಾರ್ವಜನಿಕ ಆಸ್ತಿಗೆ ಹಾನಿ, ಟೋಲ್ ನಿಯಮ ಉಲ್ಲಂಘನೆ ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.