


ಡೈಲಿವಾರ್ತೆ: 27/ಜೂ./2026


ಜಾತಿ, ಧರ್ಮ ಮತ್ತು ರಾಜಕೀಯ ಮೀರಿದ ಮನುಷ್ಯತ್ವ: ಆರ್‌ಎಸ್‌ಎಸ್ ಮಾಜಿ ಕಾರ್ಯಕರ್ತನ ಅಂತಿಮಯಾತ್ರೆ ಮುನ್ನಡೆಸಿದ ಮುಸ್ಲಿಂ ಮಹಿಳೆ

ಕಾಸರಗೋಡು, ಜೂನ್ 27: ಧರ್ಮ, ಜಾತಿ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ಕೇರಳದ ಕಾಸರಗೋಡಿನಲ್ಲಿ ನಡೆದ ಒಂದು ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಕ್ಯಾನ್ಸರ್‌ನಿಂದ ಮೃತಪಟ್ಟ ಮಾಜಿ ಆರ್‌ಎಸ್‌ಎಸ್ ಕಾರ್ಯಕರ್ತ ನಾರಾಯಣ ತೊಟ್ಟತ್ತೋಡಿ (64) ಅವರ ಅಂತ್ಯಸಂಸ್ಕಾರವನ್ನು ಮುಸ್ಲಿಂ ಮಹಿಳೆ ಇರ್ಫಾನಾ ಇಕ್ಬಾಲ್ ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದು, ಈ ಘಟನೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾರಾಯಣ ತೊಟ್ಟತ್ತೋಡಿ ಅವರು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಬಳಿಕ ಅವರ ಸ್ವಗ್ರಾಮವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬ್ಲಾಕ್ ವ್ಯಾಪ್ತಿಯ ಮೀಂಜ ಪಂಚಾಯಿತಿಯ ಚಿಗ್ರುಪಾಡವು ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಸುಮಾರು ಒಂದು ತಿಂಗಳ ಹಿಂದೆ ಗ್ರಾಮದ ಅಂಗಡಿಯೊಂದರ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ನಾರಾಯಣ ಪತ್ತೆಯಾಗಿದ್ದರು. ಅವರಿಗೆ ಬಾಯಿಯ ಕ್ಯಾನ್ಸರ್ ಕೊನೆಯ ಹಂತದಲ್ಲಿದ್ದು, ಕುಟುಂಬದ ಸಮಸ್ಯೆಗಳಿಂದ ನಿರಾಶ್ರಿತರಾಗಿದ್ದರು. ವಯೋವೃದ್ಧ ಸಹೋದರಿಗೆ ಅವರನ್ನು ನೋಡಿಕೊಳ್ಳುವ ಪರಿಸ್ಥಿತಿಯೂ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ದಿನಗೂಲಿ ಕಾರ್ಮಿಕರಾಗಿದ್ದ ನಾರಾಯಣ ಅವರು ಸುಮಾರು 20 ವರ್ಷಗಳ ಹಿಂದೆ ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಎರಡು ಮದುವೆಯಾಗಿದ್ದ ಅವರಿಗೆ ಮೊದಲ ಪತ್ನಿಯಿಂದ ಮಕ್ಕಳು ಇದ್ದರೂ, ಅವರು ನಾರಾಯಣ ಅವರಿಂದ ದೂರವಾಗಿದ್ದರು ಎನ್ನಲಾಗಿದೆ.
ಈ ವಿಷಯ ತಿಳಿದ ವಾರ್ಡ್ ಸದಸ್ಯ ಶೆರೀಫ್ ಚಿನಾಲಾ ಅವರು ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ಅವರನ್ನು ಸಂಪರ್ಕಿಸಿದರು. ಇರ್ಫಾನಾ ಅವರ ಕುಟುಂಬ ನಡೆಸುತ್ತಿರುವ ಶೇಖ್ ಜಾಯೆದ್ ಫೌಂಡೇಶನ್‌ನ ವೃದ್ಧಾಶ್ರಮಕ್ಕೆ ನಾರಾಯಣ ಅವರನ್ನು ದಾಖಲಿಸುವ ಉದ್ದೇಶವಿದ್ದರೂ, ಅಷ್ಟರಲ್ಲಾಗಲೇ ಅವರ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿತ್ತು. ಕೂಡಲೇ ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ನಾರಾಯಣ ಅವರ ನಿಧನದ ಬಳಿಕ ಕುಟುಂಬದವರು ಹಾಗೂ ಆಪ್ತರಿಂದ ಅಗತ್ಯ ಸಹಕಾರ ಸಿಗದ ಹಿನ್ನೆಲೆಯಲ್ಲಿ, ಇರ್ಫಾನಾ ಇಕ್ಬಾಲ್ ಅವರೇ ಮುಂದೆ ಬಂದು ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಧರ್ಮದ ಗಡಿಗಳನ್ನು ಮೀರಿ ಮಾನವೀಯತೆಯನ್ನು ಮೆರೆದ ಈ ನಡೆಗೆ ಸ್ಥಳೀಯರು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಧಾರ್ಮಿಕ ಭಿನ್ನತೆಗಳಿಗಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶ ಸಾರಿದ ಈ ಘಟನೆ, ಸಮಾಜದಲ್ಲಿ ಸೌಹಾರ್ದ ಮತ್ತು ಸಹಬಾಳ್ವೆಗೆ ಮಾದರಿಯಾಗಿದೆ.