ಡೈಲಿವಾರ್ತೆ: 04//ಜು./2026

ಮಲ್ಪೆ: ಶೇರ್ ಮಾರ್ಕೆಟಿಂಗ್ ಹೆಸರಲ್ಲಿ ಭಾರಿ ವಂಚನೆ – ಡಾಲರ್ ಆಸೆ ತೋರಿಸಿ ಮಹಿಳೆಯಿಂದ 30.90 ಲಕ್ಷ ರೂ. ಹೂಡಿಕೆ ಮಾಡಿಸಿ ಕಚೇರಿ ಮುಚ್ಚಿ ಪರಾರಿ, ನಾಲ್ವರ ವಿರುದ್ಧ ಪ್ರಕರಣ ದಾಖಲು

ಉಡುಪಿ: ಶೇರ್ ಮಾರ್ಕೆಟಿಂಗ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಹಣ ದ್ವಿಗುಣಗೊಳ್ಳುತ್ತದೆ ಹಾಗೂ ವಿದೇಶಿ ಕಂಪನಿಯ ಮೂಲಕ ಡಾಲರ್ ರೂಪದಲ್ಲಿ ಆದಾಯ ಬರಲಿದೆ ಎಂದು ನಂಬಿಸಿ, ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಗಂಭೀರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೀಪ ಆಚಾರ್ಯ, ಜ್ಯೋತಿ ಜತ್ತನ್, ದಮಯಂತಿ.ಎ ಹಾಗೂ ರೋಹಿಣಿ ಎಂಬುವವರನ್ನು ಆರೋಪಿಗಳೆಂದು ತಿಳಿದುಬಂದಿದೆ.

​ಘಟನೆಯ ಹಿನ್ನೆಲೆ:
ಉಡುಪಿ ತಾಲೂಕಿನ ಕೋಡಿ ಗ್ರಾಮದ ನಿವಾಸಿ ಇಂದಿರಾ ಬಂಗೇರ (51) ಎಂಬುವವರು ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದಿನಾಂಕ 19/06/2026 ರಂದು ಆರೋಪಿಗಳು ಇಂದಿರಾ ಬಂಗೇರ ಅವರ ಮನೆಗೆ ಭೇಟಿ ನೀಡಿದ್ದರು. ಮಲ್ಪೆಯ ಕಾರ್ತಿಕ್ ಸಹಜ್ ಕಟ್ಟಡದಲ್ಲಿ ಕಚೇರಿ ಹೊಂದಿರುವ ‘ಬಿ ಜಿ ವೆಲ್ತ್‌ ಶೇರಿಂಗ್‌’ ಎಂಬ ಶೇರ್ ಮಾರ್ಕೆಟಿಂಗ್ ಸಂಸ್ಥೆಯ ಪ್ರತಿನಿಧಿಗಳೆಂದು ತಮ್ಮನ್ನು ಪರಿಚಯಿಸಿಕೊಂಡಿದ್ದರು.
​ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಶೀಘ್ರದಲ್ಲಿ ಹಣ ದ್ವಿಗುಣವಾಗುತ್ತದೆ ಎಂದು ಪಿರ್ಯಾದಿದಾರರನ್ನು ಪುಸಲಾಯಿಸಿದ್ದರು. ಅಲ್ಲದೆ, ಇದೊಂದು ಪ್ರಮುಖ ವಿದೇಶಿ ಕಂಪನಿಯಾಗಿದ್ದು, ಒಮ್ಮೆ ಮಾತ್ರ ದೊಡ್ಡ ಮೊತ್ತದ ಹೂಡಿಕೆ ಮಾಡಿದಲ್ಲಿ, ಡಾಲರ್ ರೂಪದಲ್ಲಿ ಐಡಿ (ID) ಓಪನ್ ಆಗಿ ಅದರಲ್ಲಿ ಹಣ ಹೂಡಿಕೆಯಾಗುತ್ತದೆ. ತದನಂತರ ಭಾರಿ ಲಾಭಾಂಶ ಬರಲಿದೆ ಎಂದು ನಂಬಿಸಿದ್ದರು.

ಆರೋಪಿಗಳ ಮಾತುಗಳನ್ನು ಸತ್ಯವೆಂದು ನಂಬಿದ ಇಂದಿರಾ ಬಂಗೇರ ಅವರು, ತಮ್ಮ ಕುಟುಂಬದ ಸದಸ್ಯರು ಹಾಗೂ ಇತರ ಪರಿಚಿತರಿಂದ ಹಣ ಕ್ರೋಢೀಕರಿಸಿ ಒಟ್ಟು 30,90,000/- (ಮೂವತ್ತು ಲಕ್ಷದ ತೊಂಬತ್ತು ಸಾವಿರ) ರೂಪಾಯಿಗಳನ್ನು ಆರೋಪಿಗಳ ವಶಕ್ಕೆ ನೀಡಿದ್ದರು. ಆದರೆ, ಹಣ ಪಡೆದ ನಂತರ ಆರೋಪಿಗಳು ಭರವಸೆ ನೀಡಿದಂತೆ ಯಾವುದೇ ಹೂಡಿಕೆ ಮಾಡದೆ, ಲಾಭಾಂಶವನ್ನೂ ನೀಡದೆ ಸತಾಯಿಸಿದ್ದಾರೆ.
​ಕೊನೆಗೆ ಹೂಡಿಕೆದಾರರು ತಮ್ಮ ಅಸಲು ಹಣವನ್ನು ವಾಪಸ್ ಕೇಳಿದಾಗ, ಹಣವನ್ನೂ ನೀಡದೆ ಮಲ್ಪೆಯಲ್ಲಿದ್ದ ತಮ್ಮ ಕಚೇರಿಯನ್ನು ರಾತ್ರೋರಾತ್ರಿ ಬಂದ್ ಮಾಡಿ, ಮೊಬೈಲ್ ಫೋನ್‌ಗಳನ್ನು ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಮೂಲಕ ಪಿರ್ಯಾದಿದಾರರಿಗೆ ಹಾಗೂ ಸಾರ್ವಜನಿಕರಿಗೆ ನಂಬಿಕೆ ದ್ರೋಹ ಮತ್ತು ಭಾರಿ ಹಣಕಾಸು ವಂಚನೆ ಎಸಗಿದ್ದಾರೆ ಎನ್ನಲಾಗಿದೆ.

ಬಲಿಪಶುಗಳಾದ ಇಂದಿರಾ ಬಂಗೇರ ಅವರು ನೀಡಿದ ಲಿಖಿತ ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಕಲಂ: 316(2) (ನಂಬಿಕೆ ದ್ರೋಹ), 318(4) (ವಂಚನೆ) ಜೊತೆಗೆ 3(5) (ಜಂಟಿ ಅಪರಾಧ ಎಸಗುವ ಉದ್ದೇಶ) ರ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.