


ಡೈಲಿವಾರ್ತೆ: 04/ಜು./2026


ಉಡುಪಿ: ರಿಯಲ್ ಎಸ್ಟೇಟ್ ಹೂಡಿಕೆ ಹೆಸರಲ್ಲಿ ₹70 ಲಕ್ಷ ವಂಚನೆ, ಹನಿಟ್ರ್ಯಾಪ್ ಹಾಗೂ ಜೀವ ಬೆದರಿಕೆ ಆರೋಪ, ಕಿಲಾಡಿ ಮಹಿಳೆ ಬಂಧನ!

ಉಡುಪಿ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜಂಟಿ ಹೂಡಿಕೆಯ ಹೆಸರಿನಲ್ಲಿ ಬರೋಬ್ಬರಿ ₹70 ಲಕ್ಷ ಹಣ ಪಡೆದು ವಂಚಿಸಿರುವುದಲ್ಲದೆ, ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬ್ಲ್ಯಾಕ್‌ಮೇಲ್ ಹಾಗೂ ಜೀವ ಬೆದರಿಕೆ ಒಡ್ಡಿದ್ದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿತೆ ಜೀನತ್ ಇಬ್ರಾಹಿಂ ಎಂಬಾಕೆಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಉಡುಪಿ ಮೂಲದ ದೂರುದಾರರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಅವಧಿಯಲ್ಲಿ ಆರೋಪಿತೆ ಜೀನತ್ ಇಬ್ರಾಹಿಂ ಪರಿಚಯವಾಗಿತ್ತು. ಇಬ್ಬರೂ ಸೇರಿ ಉಡುಪಿಯಲ್ಲಿ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿಯನ್ನು ಆರಂಭಿಸಿದ್ದರು. ಈ ವೇಳೆ ಆರೋಪಿತೆಯ ಮಾತುಗಳನ್ನು ನಂಬಿದ ದೂರುದಾರರು, ಜಮೀನು ಖರೀದಿಯಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ₹70 ಲಕ್ಷ ನಗದನ್ನು ನೀಡಿದ್ದರು. ಆದರೆ, ಆರೋಪಿತೆಯು ಈ ದೊಡ್ಡ ಮೊತ್ತವನ್ನು ಜಮೀನು ಖರೀದಿಗೆ ಬಳಸದೆ, ತನ್ನ ವೈಯಕ್ತಿಕ ಉದ್ದೇಶಗಳಿಗೆ ಬಳಸಿ ದೂರುದಾರರಿಗೆ ವಿಶ್ವಾಸ ದ್ರೋಹ ಎಸಗಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪೆನ್‌ಡ್ರೈವ್‌ನಲ್ಲಿ ಸಿಕ್ಕಿತು ಅಶ್ಲೀಲ ವಿಡಿಯೊಗಳ ರಹಸ್ಯ!
ದೂರುದಾರರು ತಮ್ಮ ಜಂಟಿ ಕಚೇರಿಯನ್ನು ಮುಚ್ಚುವ ಸಂದರ್ಭದಲ್ಲಿ ಅಲ್ಲಿ ಕೆಲವು ರಹಸ್ಯ ಕಡತಗಳು ಹಾಗೂ ಪೆನ್‌ಡ್ರೈವ್‌ಗಳು ಪತ್ತೆಯಾಗಿದ್ದವು. ಅವುಗಳನ್ನು ಪರಿಶೀಲಿಸಿದಾಗ ಸಮಾಜದ ಹಲವಾರು ಪ್ರಭಾವಿ ವ್ಯಕ್ತಿಗಳ ಖಾಸಗಿ ಹಾಗೂ ಅಶ್ಲೀಲ ಛಾಯಾಚಿತ್ರಗಳು ಮತ್ತು ವಿಡಿಯೊಗಳು ಇರುವುದು ಬೆಳಕಿಗೆ ಬಂದಿದೆ. ಈ ಮೂಲಕ ಆರೋಪಿತೆಯು ವ್ಯವಸ್ಥಿತ ಬ್ಲ್ಯಾಕ್‌ಮೇಲ್ ದಂಧೆ ನಡೆಸುತ್ತಿದ್ದ ಶಂಕೆ ವ್ಯಕ್ತವಾಗಿದೆ.
ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವ ಬೆದರಿಕೆ; ಹತ್ಯೆಗೆ ಸಂಚು
ತಮ್ಮ ₹70 ಲಕ್ಷ ಹಣವನ್ನು ವಾಪಸ್ ಕೇಳಿದ ದೂರುದಾರರ ಹೊಸ ಕಚೇರಿಗೆ ನುಗ್ಗಿದ ಆರೋಪಿತೆ ಜೀನತ್, ಮತ್ತಷ್ಟು ಹಣ ನೀಡುವಂತೆ ಪಟ್ಟು ಹಿಡಿದಿದ್ದಾಳೆ. ಹಣ ನೀಡದಿದ್ದರೆ ದೂರುದಾರರ ಮೇಲೆಯೇ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಅಲ್ಲದೆ, ದೂರುದಾರರ ಅಶ್ಲೀಲ ವಿಡಿಯೊಗಳೂ ತನ್ನ ಬಳಿಯಿವೆ ಎಂದು ಹೇಳಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಅಷ್ಟಕ್ಕೇ ನಿಲ್ಲದೆ, ದೂರುದಾರರ ಪತ್ನಿ ಹಾಗೂ ಮಕ್ಕಳನ್ನು ಅಪಹರಿಸಿ ಕೊಲೆ ಮಾಡುವುದಾಗಿಯೂ ಜೀವ ಬೆದರಿಕೆ ಹಾಕಿದ್ದಾಳೆ. ಈ ಕೃತ್ಯದಲ್ಲಿ ಸಬೀನಾ ಇಲಿಯಾಸ್ ಹಾಗೂ ಇತರರು ಆರೋಪಿತೆಯೊಂದಿಗೆ ಕೈಜೋಡಿಸಿ ಅಕ್ರಮ ಹಣ ವಸೂಲಿ ಜಾಲ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಗಂಭೀರವಾಗಿ ಆರೋಪಿಸಲಾಗಿದೆ.
ವಿಶೇಷ ಪೊಲೀಸ್ ತಂಡದಿಂದ ಕಾರ್ಯಾಚರಣೆ – ಕಸ್ಟಡಿಗೆ ಆರೋಪಿ:
ದೂರಿನ ಗಂಭೀರತೆಯನ್ನು ಪರಿಗಣಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 79/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ: 308(6), 351(2), 318(2) ಹಾಗೂ 3(5) ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆಗಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಭರತೇಶ್ ಕಂಕಣವಾಡಿ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಕಾರ್ಯಾಚರಣೆ ನಡೆಸಿ, ಜುಲೈ 2ರಂದು ಪಡುಬಿದ್ರೆಯ ಕಂಚಿನಡ್ಕ ಮಸೀದಿ ಸಮೀಪದ ಬಾಡಿಗೆ ಮನೆಯಲ್ಲಿದ್ದ ಆರೋಪಿತೆ ಜೀನತ್ ಇಬ್ರಾಹಿಂ (ಪತಿ: ಅಬ್ದುಲ್ ಸಲಾಂ) ಎಂಬಾಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸತ್ಯಾಸತ್ಯತೆ ಹಾಗೂ ಜಾಲದ ಆಳವನ್ನು ಅರಿಯಲು ನ್ಯಾಯಾಲಯವು ಆಕೆಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.