


ಡೈಲಿವಾರ್ತೆ: 08/ಜು./2026


ಉಡುಪಿ: 10 ಲಕ್ಷ ರೂ. ಸಾಲ ಪಡೆದು ವಂಚನೆ – ಹಣ ಕೇಳಿದ ಯುವಕನಿಗೆ ಜೀವ ಬೆದರಿಕೆ, ಒಂದೇ ಕುಟುಂಬದ 6 ಮಂದಿ ವಿರುದ್ಧ ಪ್ರಕರಣ ದಾಖಲು

ಉಡುಪಿ: ಉದ್ಯೋಗದ ನಿಮಿತ್ತ ಪರಿಚಯವಾದ ಯುವಕನೊಬ್ಬನಿಗೆ ನಂಬಿಸಿ, ಒಟ್ಟು 10 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದಲ್ಲದೆ, ಹಣ ವಾಪಸ್ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿರುವ ಗಂಭೀರ ಪ್ರಕರಣವೊಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅಂಬಲಪಾಡಿ ಗ್ರಾಮದ ನಿವಾಸಿ ಸಜ್ಜನ್ ಶೆಟ್ಟಿ (34) ಎಂಬುವರು ನೀಡಿದ ದೂರಿನನ್ವಯ ಸಿದ್ದಾರ್ಥ ಶೆಟ್ಟಿ, ಆತನ ತಂದೆ ಅಮರನಾಥ್ ಶೆಟ್ಟಿ, ತಾಯಿ ಚಂದ್ರಕಲಾ ಎ. ಶೆಟ್ಟಿ, ಮಲ್ಲಿಕಾ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಮತ್ತು ಸದಾಶಿವ ಶೆಟ್ಟಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರರಾದ ಸಜ್ಜನ್ ಶೆಟ್ಟಿ ಅವರಿಗೆ ಕೆಲಸದ ನಿಮಿತ್ತ ಸಿದ್ದಾರ್ಥ ಶೆಟ್ಟಿ ಎಂಬಾತನ ಪರಿಚಯವಾಗಿತ್ತು. ಈ ಸ್ನೇಹದ ಮೂಲಕ ಸಿದ್ದಾರ್ಥನ ಇಡೀ ಕುಟುಂಬದವರು ಸಜ್ಜನ್ ಅವರಿಗೆ ಪರಿಚಯವಾಗಿದ್ದು, ಇವರೆಲ್ಲರೂ ಆಗಾಗ ಭೇಟಿಯಾಗುತ್ತಿದ್ದರು. ಈ ಸುದೀರ್ಘ ಪರಿಚಯವನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ಒಂದು ದಿನ ಆರೋಪಿ ಸಿದ್ದಾರ್ಥ ಶೆಟ್ಟಿಗೆ ಹಣದ ತುರ್ತು ಅವಶ್ಯಕತೆ ಎದುರಾದಾಗ, ಇಡೀ ಕುಟುಂಬಸ್ಥರೆಲ್ಲರೂ ಒಟ್ಟಾಗಿ ಸಜ್ಜನ್ ಶೆಟ್ಟಿ ಅವರ ಬಳಿ ಬಂದಿದ್ದಾರೆ. 5 ತಿಂಗಳ ಒಳಗಾಗಿ ಸಾಲದ ಮೊತ್ತವನ್ನು ಸಂಪೂರ್ಣವಾಗಿ ಮರಳಿ ನೀಡುವುದಾಗಿ ನಂಬಿಸಿದ್ದಾರೆ. ಆರೋಪಿಗಳ ಮಾತನ್ನು ಸತ್ಯವೆಂದು ನಂಬಿದ ಸಜ್ಜನ್ ಶೆಟ್ಟಿ ಅವರು ಒಟ್ಟು 10,00,000/- (ಹತ್ತು ಲಕ್ಷ) ರೂಪಾಯಿ ಹಣವನ್ನು ನೀಡಿದ್ದಾರೆ. ಆದರೆ, ಸಾಲದ ಅವಧಿ ಮುಗಿದರೂ ಆರೋಪಿಗಳು ಹಣ ನೀಡದೆ ನೆಪ ಹೇಳುತ್ತಾ ಕಾಲಹರಣ ಮಾಡ ತೊಡಗಿದ್ದಾರೆ.
ಹಣಕ್ಕಾಗಿ ಸಜ್ಜನ್ ಶೆಟ್ಟಿ ಒತ್ತಾಯಿಸಿದಾಗ, ಮುಖ್ಯ ಆರೋಪಿ ತನಗೆ ಸೇರಿದ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಯ ಚೆಕ್ ಒಂದನ್ನು ನೀಡಿದ್ದಾನೆ. ಆದರೆ, ಸಜ್ಜನ್ ಅವರು ಆ ಚೆಕ್ ಅನ್ನು ಬ್ಯಾಂಕಿಗೆ ಜಮಾ ಮಾಡಿದಾಗ, ಆರೋಪಿಯ ಖಾತೆಯಲ್ಲಿ ಸೂಕ್ತ ಹಣವಿಲ್ಲದ ಕಾರಣ (Cheque Bounce) ಚೆಕ್ ಹಿಂತಿರುಗಿದೆ. ಈ ವಂಚನೆಯ ಕುರಿತು ದೂರುದಾರರು ಆರೋಪಿಗಳನ್ನು ಪ್ರಶ್ನಿಸಿದಾಗ, ಆರೋಪಿಗಳು ಸಜ್ಜನ್ ಶೆಟ್ಟಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳು ಮೊದಲೇ ಯೋಜಿಸಿದಂತೆ ವಂಚನೆ ಮಾಡುವ ಉದ್ದೇಶದಿಂದಲೇ ಹಣ ಪಡೆದು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಸಂತ್ರಸ್ತ ಸಜ್ಜನ್ ಶೆಟ್ಟಿ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2026, ಐಪಿಎಸ್ ಕಲಂ (IPC) 420 (ವಂಚನೆ), 406 (ನಂಬಿಕೆ ದ್ರೋಹ), 504 (ಶಾಂತಿ ಭಂಗ ತರುವ ಉದ್ದೇಶದ ನಿಂದನೆ) ಹಾಗೂ 506 (ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.