ಡೈಲಿವಾರ್ತೆ: 08/ಜು./2026

ಕುಮಟಾ: ಅಪರಿಚಿತ ವಾಹನ ಡಿಕ್ಕಿ – ಯುವ ವಿದ್ಯಾರ್ಥಿ ಬಲಿ, ಮತ್ತೊರ್ವ ಗಂಭೀರ

​ಕುಮಟಾ: ತಾಲೂಕಿನ ಬರ್ಗಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಐಟಿಐ ವಿದ್ಯಾರ್ಥಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

​ಹೆಗಡೆ ನಿವಾಸಿ ಚಿನ್ಮಯ ಪಟಗಾರ್ (18) ಮೃತಪಟ್ಟ ದುರ್ದೈವಿ ವಿದ್ಯಾರ್ಥಿ. ಅಪಘಾತದಲ್ಲಿ ಬೈಕ್‌ನಲ್ಲಿದ್ದ ಮತ್ತೋರ್ವ ಯುವಕ, ಯಾಣ ನಿವಾಸಿ ತಿಲಕ ಗೌಡ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

​ಘಟನೆಯ ವಿವರ:
​ಮೃತ ಚಿನ್ಮಯ ಹಾಗೂ ಗಾಯಾಳು ತಿಲಕ ಗೌಡ ಇಬ್ಬರೂ ಅಂಕೋಲಾದ ಕಾಲೇಜೊಂದರಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದರು. ಮಂಗಳವಾರದಂದು ಇಬ್ಬರೂ ಬೈಕ್‌ನಲ್ಲಿ ಕುಮಟಾದಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದಾಗ ಬರ್ಗಿ ಸಮೀಪ ಈ ದುರ್ಘಟನೆ ಸಂಭವಿಸಿದೆ. ಇವರು ಚಲಿಸುತ್ತಿದ್ದ ಬೈಕ್‌ಗೆ ಅಪರಿಚಿತ ವಾಹನವೊಂದು ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಗೆ ಬಿದ್ದು ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದರು. ಆದರೆ, ಅಪಘಾತ ಎಸಗಿದ ವಾಹನದ ಚಾಲಕ ಮಾನವೀಯತೆಯನ್ನೂ ಮರೆತು ಸ್ಥಳದಿಂದ ವಾಹನದೊಂದಿಗೆ ಪರಾರಿಯಾಗಿದ್ದಾನೆ.

​ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ತಕ್ಷಣವೇ 108 ಆಂಬುಲೆನ್ಸ್ ಸೌಕರ್ಯದ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸುವಲ್ಲಿ ನೆರವಾದರು. ಆದರೆ, ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದ್ದರಿಂದ ಚಿನ್ಮಯ ಪಟಗಾರ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮತ್ತೋರ್ವ ಯುವಕ ತಿಲಕ ಗೌಡ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು, ಅಪಘಾತಕ್ಕೆ ಕಾರಣವಾಗಿ ಪರಾರಿಯಾಗಿರುವ ಅಪರಿಚಿತ ವಾಹನ ಮತ್ತು ಅದರ ಚಾಲಕನ ಪತ್ತೆಗಾಗಿ ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.