


ಡೈಲಿವಾರ್ತೆ: 10/ಜು./2026


ಪೂಜೆಯ ನೆಪದಲ್ಲಿ ಬಾಬಾ ಅಪಹರಣ, ಮಾರಣಾಂತಿಕ ಹಲ್ಲೆ ನಡೆಸಿ ₹4.25 ಲಕ್ಷ ದೋಚಿದ್ದ ನಾಲ್ವರ ಬಂಧನ!

ಬೆಂಗಳೂರು: ಮನೆಯಲ್ಲಿ ಶಾಂತಿ ಪೂಜೆ ಮಾಡಿಸುವ ನೆಪದಲ್ಲಿ ಬಾಬಾ ಒಬ್ಬರನ್ನು ಅಪಹರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರೋಬ್ಬರಿ 4.25 ಲಕ್ಷ ರೂಪಾಯಿ ಹಣ ದೋಚಿದ್ದ ನಾಲ್ಕು ಮಂದಿ ಸೈತಾನ ಬುದ್ಧಿಯ ಕಿಡ್ನಾಪರ್ಸ್‌ಗಳನ್ನು ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ತುಮಕೂರು ಮೂಲದ ಆರಿಫ್ ಮತ್ತು ಆದಿಲ್, ಚಿಕ್ಕಬಾಣಾವರದ ಇಮ್ರಾನ್ ಹಾಗೂ ಆರ್.ಟಿ. ನಗರದ ಕಾದೀರ್ ಬಂಧಿತ ಆರೋಪಿಗಳಾಗಿದ್ದಾರೆ. ನಗರದ ಯಲಹಂಕದಲ್ಲಿ ವಾಸವಾಗಿರುವ ಬಾಬಾ ಮೊಹಮ್ಮದ್ ತಾರಿಕ್ ಹುಸೇನ್ ಅವರು ನೀಡಿದ ದೂರಿನ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಬಾಬಾ ತಾರಿಕ್ ಹುಸೇನ್ ಅವರನ್ನು ಸಂಪರ್ಕಿಸಿದ್ದ ಪ್ರಮುಖ ಆರೋಪಿ ಆರಿಫ್, ತನ್ನ ಮನೆಗೆ ಬಂದು ಶಾಂತತೆಗಾಗಿ ಪೂಜೆ ಮಾಡಿಕೊಡಬೇಕು ಎಂದು ಕೋರಿ ಮುಂಗಡವಾಗಿ 10 ಸಾವಿರ ರೂಪಾಯಿಗಳನ್ನು ಆನ್‌ಲೈನ್ ಮೂಲಕ ಪಾವತಿಸಿದ್ದ. ಆದರೆ, ಬಾಬಾ ತಾರಿಕ್ ಕಾರಣಾಂತರಗಳಿಂದ ಮೂರು ದಿನಗಳ ಕಾಲ ಭೇಟಿ ನೀಡಿರಲಿಲ್ಲ. ಜೂನ್ 29 ರಂದು ಆರೋಪಿ ಆರಿಫ್, ಬಾಬಾನನ್ನು ಕರೆತರಲು ತಾನೇ ಕಾರು ಕಳುಹಿಸಿಕೊಡುವುದಾಗಿ ಹೇಳಿದ್ದ. ಕಾರು ಬಂದಾಗ ಹೋಗಲು ನಿರಾಕರಿಸಿದ ತಾರಿಕ್ ಅವರನ್ನು ಆರೋಪಿಗಳು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿದ್ದರು.
ಅಪಹರಣಕ್ಕೊಳಗಾದ ಬಾಬಾನನ್ನು ತುಮಕೂರು ಹೊರವಲಯಕ್ಕೆ ಕರೆದೊಯ್ದಾಗ ಅಲ್ಲಿ ಮತ್ತಿಬ್ಬರು ವ್ಯಕ್ತಿಗಳು ಕಾಯುತ್ತಿದ್ದರು. ಈ ವೇಳೆ ಗ್ಯಾಂಗ್‌ನಲ್ಲಿದ್ದ ಆದಿಲ್ ಎಂಬಾತ ಹಿಂದೆ ನೀನು ಶಾಂತಿ ಪೂಜೆ ಮಾಡುವುದಾಗಿ ಹಣ ಪಡೆದುಕೊಂಡಿದ್ದೆ, ಆದರೆ ಅದರಿಂದ ನನಗೆ ಯಾವುದೇ ಉಪಯೋಗವಾಗಿಲ್ಲ ಎಂದು ಹಳೇ ಕದನ ತೆಗೆದು ಜಗಳವಾಡಿದ್ದಾನೆ. ಹಣ ನೀಡುವಂತೆ ಬೆದರಿಸಿದಾಗ ಬಾಬಾ ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ನಾಲ್ವರು ಆರೋಪಿಗಳು ಲಾಂಗ್ ಮತ್ತು ಮಚ್ಚುಗಳನ್ನು ಬಳಸಿ ತಾರಿಕ್ ಅವರ ಮೇಲೆ ತೀವ್ರವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಬ್ಯಾಂಕ್‌ಗೆ ಕರೆದೊಯ್ದು ಲಕ್ಷಾಂತರ ಹಣ ಲೂಟಿ!
ಬಳಿಕ ಬಾಬಾನ ಮೊಬೈಲ್ ಪಾಸ್‌ವರ್ಡ್ ಹಾಗೂ ಯುಪಿಐ (UPI) ಪಿನ್ ಪಡೆದುಕೊಂಡ ಆರೋಪಿಗಳು, ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷಕ್ಕೂ ಅಧಿಕ ಹಣವನ್ನು ಗಮನಿಸಿದ್ದಾರೆ. ತಕ್ಷಣವೇ ಆರಿಫ್ 13 ಸಾವಿರ ರೂಪಾಯಿಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾನೆ. ಅಂದು ರಾತ್ರಿ ಅಜ್ಞಾತ ಸ್ಥಳದಲ್ಲಿ ಬಾಬಾನನ್ನು ಕೂಡಿಹಾಕಿದ್ದ ಗ್ಯಾಂಗ್, ಮರುದಿನ ಅಗತ್ಯ ದಾಖಲೆಗಳನ್ನು ವಾಟ್ಸಾಪ್ ಮಾಡಿಸಿಕೊಂಡು ಖಾಸಗಿ ಬ್ಯಾಂಕ್‌ಗೆ ಬಲವಂತವಾಗಿ ಕರೆದೊಯ್ದಿದ್ದಾರೆ.
ಅಲ್ಲಿ ಬಾಬಾನಿಂದಲೇ ವಿಥ್‌ಡ್ರಾ ಫಾರ್ಮ್‌ಗೆ ಸಹಿ ಹಾಕಿಸಿ, ಸಂಜೆ ವೇಳೆ 4.25 ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಹಣ ಕೈ ಸೇರಿದ ನಂತರ ಬಾಬಾನನ್ನು ಕಾರಿನಲ್ಲಿ ದಾಬಸ್‌ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರದ ಹೊರವಲಯಕ್ಕೆ ಕರೆತಂದು ಬಿಟ್ಟಿದ್ದಾರೆ.
ಈ ಘಟನೆ ಕುರಿತು ಯಾರಿಗಾದರೂ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿ ಮೊಬೈಲ್ ನೀಡಿ ಪರಾರಿಯಾಗಿದ್ದರು.
ಬಲಿಪಶು ಬಾಬಾ ತಾರಿಕ್ ಹುಸೇನ್ ಅವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಸಂಪಿಗೆಹಳ್ಳಿ ಠಾಣೆ ಪೊಲೀಸರು, ನೆಟ್‌ವರ್ಕ್ ಮತ್ತು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ನಾಲ್ವರೂ ಆರೋಪಿಗಳನ್ನು ಬಂಧಿಸಿ, ಕಂಬಿ ಎಣಿಸುವಂತೆ ಮಾಡಿದ್ದಾರೆ.