


ಡೈಲಿವಾರ್ತೆ: 13/ಜು./2026


ಚಿತ್ರದುರ್ಗ: ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿ – ದಂಪತಿ ಸ್ಥಳದಲ್ಲೇ ದುರ್ಮರಣ

ಹೊಳಲ್ಕೆರೆ: ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ
ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹನುಮಂತ ದೇವರ ಕಣಿವೆಯಲ್ಲಿ ಜುಲೈ 12 ರಂದು ಭಾನುವಾರ ತಡರಾತ್ರಿ ಸಂಭವಿಸಿದೆ.
ಮೃತರನ್ನು ಚಿತ್ರದುರ್ಗದ ಪ್ರಸಿದ್ಧ ಮಾರುತಿ ಗ್ಯಾಸ್ ಏಜೆನ್ಸಿ ಮಾಲೀಕರಾದ ಲೋಹಿತ್ ಪ್ರಸಾದ್ ಹಾಗೂ ಅವರ ಧರ್ಮಪತ್ನಿ ನಿತ್ಯಶ್ರೀ ಎಂದು ಗುರುತಿಸಲಾಗಿದೆ.
ಮೃತ ದಂಪತಿಗಳು ಭಾನುವಾರ ತಡರಾತ್ರಿ ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ತಮ್ಮ ಕಾರಿನಲ್ಲಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಹನುಮಂತ ದೇವರ ಕಣಿವೆಯ ಬಳಿ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ವಿಷಯ ತಿಳಿಯುತ್ತಿದ್ದಂತೆ ಹೊಳಲ್ಕೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ನಜ್ಜುಗುಜ್ಜಾಗಿದ್ದ ಕಾರಿನೊಳಗೆ ಸಿಲುಕಿಕೊಂಡಿದ್ದ ದಂಪತಿಗಳ ಮೃತದೇಹಗಳನ್ನು ಪೊಲೀಸರು ತೀವ್ರ ಶ್ರಮವಹಿಸಿ ಹೊರತೆಗೆದಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.