


ಡೈಲಿವಾರ್ತೆ: 13/ಜು./2026


ಮಣಿಪಾಲ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕುಡಿಯುವ ನೀರಿನ ಘಟಕಕ್ಕೆ ನುಗ್ಗಿ ವಿದ್ಯಾರ್ಥಿಗಳಿಗೆ ಗಾಯ

ಮಣಿಪಾಲ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕುಡಿಯುವ ನೀರಿನ ಘಟಕಕ್ಕೆ ನುಗ್ಗಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಣಿಪಾಲ ಈಶ್ವರನಗರದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.
ಮಣಿಪಾಲದ ಈಶ್ವರ ನಗರದಲ್ಲಿರುವ ನಗರಸಭೆಯ ಶುದ್ಧ ಕುಡಿಯುವ ನೀರಿನ ಘಟಕದ ಆವರಣಕ್ಕೆ ಮಧ್ಯರಾತ್ರಿ ಕಾರೊಂದು ನುಗ್ಗಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ.
ಮಣಿಪಾಲದಿಂದ ಆತ್ರಾಡಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 169A ಮೂಲಕ ಸಾಗುತ್ತಿದ್ದ ಕಾರೊಂದು ಮಧ್ಯರಾತ್ರಿ ದಾರಿ ತಪ್ಪಿ ಹೆದ್ದಾರಿಯಿಂದ ಹೊರಬಂದು ನೇರವಾಗಿ ಈಶ್ವರ ನಗರದಲ್ಲಿರುವ ನಗರಸಭೆಯ ಶುದ್ಧ ಕುಡಿಯುವ ನೀರಿನ
ಘಟಕದೊಳಗೆ ನುಗ್ಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಏರ್‌ಬ್ಯಾಗ್‌ಗಳು ತೆರೆದಿದ್ದು, ಕಾರಿನಲ್ಲಿದ್ದ ವಿದ್ಯಾರ್ಥಿಗಳಿಗೆ ತಲೆಗೆ ಗಾಯಗಳಾಗಿವೆ. ತಕ್ಷಣ ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರ ಪ್ರಕಾರ, ಇದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ 169A ಕಾಮಗಾರಿ ಅಪೂರ್ಣವಾಗಿರುವುದು, ಅಗತ್ಯ ತಡೆಗೋಡೆ ಹಾಗೂ ಎಚ್ಚರಿಕೆ ವ್ಯವಸ್ಥೆಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.