ಡೈಲಿವಾರ್ತೆ: 20/ಜು./2026

ಸಂಸತ್ ಮುತ್ತಿಗೆ ಯತ್ನ ಕಾಕ್ರೋಚ್ ಗಳ ಮೇಲೆ ಪೊಲೀಸರ ಲಾಠಿಚಾರ್ಜ್

ನವದೆಹಲಿ: ಸಂಸತ್ ಮುತ್ತಿಗೆ ಯತ್ನಿಸಿದ ಕಾಕ್ರೋಚ್ ಜನತಾ ಪಾರ್ಟಿ ಸದಸ್ಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಜುಲೈ 20ರಂದು ಸೋಮವಾರ ನಡೆದಿದೆ.
ಇದರಿಂದಾಗಿ ದೆಹಲಿಯ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಂಡಿದೆ.

ದೆಹಲಿಯ ಸಂಸತ್ತಿನ ಮುಂಗಾರು ಅಧಿವೇಶನ ಆರಂಭದ ದಿನವಾದ ಇಂದು ನವದೆಹಲಿಯ ಜಂತರ್ ಮಂತರ್ ನಿಂದ ಚಲೋ ಸಂಸತ್ ಮೆರವಣಿಗೆಗೆ ಸಿಜೆಪಿ ಕರೆ ನೀಡಿತ್ತು.
ಕರೆಯ ಬೆನ್ನಲ್ಲೇ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸಿಜೆಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಜಂತರ್ ಮಂತರ್ ನಲ್ಲಿ ಜಮಾಯಿಸಿ ಸಂಸತ್ತಿನತ್ತ ತೆರಳಲು ಮುಂದಾದರು.

ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಯೋಗ ಮಾಡಿದ್ದಾರೆ. ಮುಂಜಾಗ್ರತ ಕ್ರಮವಾಗಿ ದೆಹಲಿ ಪೊಲೀಸರು ಹಾಗೂ ರಾಪಿಡ್ ಆಕ್ಷನ್ ಫೋರ್ಸ್ ಸಿಬ್ಬಂದಿ ಜಂತರ್ ಮಂತರ್ ರಸ್ತೆಯ ಸುತ್ತಲೂ ಬಿಗಿ ಭದ್ರತೆ ಒದಗಿಸಿದ್ದರು.

ಪ್ರತಿಭಟನಾಕಾರರು ಪೊಲೀಸ್ ಕಾವಲನ್ನು ಮೀರಿ ಮುನ್ನುಗ್ಗಿದಾಗ ಪರಿಸ್ಥಿತಿ ಹದ್ದುಬಸ್ತಿಗೆ ತರಲು ಪೊಲೀಸರು ಹಗುರ ಲಾಠಿಚಾರ್ಜ್ ನಡೆಸಿ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಸಂಸತ್ತಿನ ಅಧಿವೇಶನ ಆರಂಭವಾಗುತ್ತಿರುವುದರಿಂದ ದೆಹಲಿ ನಗರದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯ (ಬಿ ಎನ್ಎಸ್ಎಸ್) ಸೆಕ್ಷನ್ 163 (ಹಳೆಯ 144ನೇ ವಿಧಿ) ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಈ ಮೆರವಣಿಗೆಗೆ ಯಾವುದೇ ಅಧಿಕೃತ ಅನುಮತಿ ನೀಡಲಲ್ಲ ಮತ್ತು ಕಾನೂನು ಉಲ್ಲೇಖಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮುಂಚಿತವಾಗಿ ಎಚ್ಚರಿಸಿದ್ದರು.