




ಡೈಲಿವಾರ್ತೆ:25/ಅ./2026

ಸಾಲಿಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು: ಸುರಕ್ಷತಾ ನಿರ್ಲಕ್ಷ್ಯದ ಆರೋಪ

ಕೋಟ: ನಿರ್ಮಾಣ ಹಂತದ ಕಟ್ಟಡದ 8ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ 18 ವರ್ಷದ ಕಾರ್ಮಿಕನೊಬ್ಬ ಕಾಲು ಜಾರಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಅ.24ರಂದು ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯ ದೇಬಾಶಿಶ್ ದಾಸ್ (18) ಮೃತಪಟ್ಟ ಕಾರ್ಮಿಕ. ಇವರು ಕಳೆದ ಎರಡು ತಿಂಗಳಿಂದ ಸಾಲಿಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಅ.24ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ 8ನೇ ಮಹಡಿಯ ಪ್ಲಂಬಿಂಗ್ ಡಕ್ಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯದ ಆರೋಪ:
ಎತ್ತರದ ಕಟ್ಟಡದಲ್ಲಿ ಅಪಾಯಕಾರಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಸುರಕ್ಷತಾ ಬೆಲ್ಟ್, ಸುರಕ್ಷತಾ ಬಲೆ ಹಾಗೂ ಹೆಲ್ಮೆಟ್ ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸದೆ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳದೆ ನಿರ್ಲಕ್ಷ್ಯದಿಂದ ಕೆಲಸ ಮಾಡಿಸಿದ್ದೇ ದುರಂತಕ್ಕೆ ಕಾರಣವೆಂದು ಮೃತನ ಸಂಬಂಧಿ ಉತ್ಪಲ್ ಮಂಡಲ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಕಟ್ಟಡದ ಲೇಬರ್ ಗುತ್ತಿಗೆದಾರ ಕರುಣಾಕರ ಎಸ್. ಕೋಟ್ಯಾನ್, ಸೈಟ್ ಇಂಜಿನಿಯರ್ ರಾಘವೇಂದ್ರ ಸೋಮಯಾಜಿ, ಮೇಸ್ತ್ರಿ ಶರತ್ ಹಾಗೂ ಕಟ್ಟಡದ ಮಾಲೀಕರ ವಿರುದ್ಧ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದ ಆರೋಪ ಮಾಡಲಾಗಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 162/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 290 ಮತ್ತು 106ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.