ಡೈಲಿವಾರ್ತೆ: 20/ಜು./2026

ಕಡಪಾಲದಲ್ಲಿ ವಿವಾಹಿತೆ ನಿಗೂಢ ಸಾವು: ಕಿರುಕುಳ ಆರೋಪದ ನಡುವೆ ಕೊಲೆ ಶಂಕೆ!

ಸುಳ್ಯ: ತಾಲೂಕಿನ ಸಂಪಾಜೆ ಗ್ರಾಮದ ಕಡೆಪಾಲದಲ್ಲಿ 22 ವರ್ಷದ ವಿವಾಹಿತೆ ಫಾತೀಮಾ ನಿಶಾನ ಅವರ ಅನುಮಾನಾಸ್ಪದ ಸಾವಿನ ಘಟನೆ ತೀವ್ರ ಸಂಚಲನ ಮೂಡಿಸಿದೆ. ಮೃತೆಯ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ನಾಲ್ಕು ವರ್ಷಗಳ ಹಿಂದೆ ಕಡಪಾಲದ ಅನ್ಸಾರ್ ರವರೊಂದಿಗೆ ವಿವಾಹವಾಗಿದ್ದ ಫಾತಿಮಾ ನಿಶಾನ ಅವರಿಗೆ ಎರಡೂವರೆ ವರ್ಷದ ಮಗುವಿದೆ.

ಜುಲೈ 18ರಂದು ರಾತ್ರಿ ಸಂಭವಿಸಿದ ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೃತ್ಯುಗೇ ಕೆಲವೇ ಕ್ಷಣಗಳ ಮೊದಲು ನಿಶಾನ ಅವರು ತನ್ನ ತಾಯಿ ಜುಬೇದ ಅವರಿಗೆ ಕರೆ ಮಾಡಿ ಗಂಡನ ಮನೆಯವರಿಂದ ಕಿರುಕಳವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ. ಆತಂಕಗೊಂಡ ತಾಯಿ ತಕ್ಷಣ ಮಗಳ ಮನೆಗೆ ಧಾವಿಸಿದಾಗ ನಿಶಾನ ಮೃತಪಟ್ಟಿರುವುದು ಕಂಡುಬಂದಿದೆ.

ನಿಶಾನ ಅವರು ಸ್ನಾನ ಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಡನ ಮನೆಯವರು ಹೇಳುತ್ತಿದ್ದರು. ತಾಯಿ ಸ್ಥಳಕ್ಕೆ ತಲುಪುವಷ್ಟರಲ್ಲಿ ಮತ ದೇಹವನ್ನು ಸ್ನಾನಗೃಹದಿಂದ ಹೊರಗೆ ತಂದು ಮಲಗಿಸಲಾಗಿತ್ತು ಎಂಬ ಆರೋಪ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಮೃತೆಯ ಕುಟುಂಬಸ್ಥರು ಇದು ಪೂರ್ವಯೋಜಿತ ಕೊಲೆ ಎಂದು ಆರೋಪಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸಾವಿನ ನಿಖರ ಕಾರಣ ಪತ್ತೆಹಚ್ಚಲು ಎಲ್ಲಾ ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ.