




ಡೈಲಿವಾರ್ತೆ:25/ಅ./2026

ಕುಂದಾಪುರ: ಹೊಸಾಡು ಗ್ರಾಮದಲ್ಲಿ ದುರಂತ:
ಕೆರೆಯಲ್ಲಿ ಮುಳುಗಿ ಇಬ್ಬರು ಶಾಲಾ ವಿದ್ಯಾರ್ಥಿನಿಯರ ದಾರುಣ ಸಾವು

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಾಡು ಗ್ರಾಮದ ಕೆರೆಯೊಂದರಲ್ಲಿ ಬಟ್ಟೆ ಒಗೆಯಲು ತೆರಳಿದ್ದ ಇಬ್ಬರು ಶಾಲಾ ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ಮೃತ ವಿದ್ಯಾರ್ಥಿನಿಯರನ್ನು ಮಲ್ಲಿಕಟ್ಟೆ ಹೆದ್ದಾರಿ ಪಕ್ಕದ ಜೋಪಡಿಯಲ್ಲಿ ವಾಸವಿದ್ದ, ಮೂಲತಃ ಹಾವೇರಿ ಜಿಲ್ಲೆಯವರಾದ ವೈಶಾಲಿ ಹಾಗೂ ಸುನಿತಾ ಎಂದು ಗುರುತಿಸಲಾಗಿದೆ.
ಇಬ್ಬರೂ ಸಮೀಪದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಕೆರೆಯಲ್ಲಿ ಮುಳುಗಿದ ಬಾಲಕಿಯರ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ತುರ್ತು ರಕ್ಷಣಾ ತಂಡಗಳು ಕಾರ್ಯಾಚರಣೆ ಆರಂಭಿಸಿದವು. ಘಟನಾ ಸ್ಥಳಕ್ಕೆ ಆಂಬುಲೆನ್ಸ್, ಅಗ್ನಿಶಾಮಕ ದಳದ ವಾಹನ ಹಾಗೂ ಮುಳುಗು ತಜ್ಞರ ತಂಡಗಳು ತಲುಪಲು ಸಾಕಷ್ಟು ಹರಸಾಹಸಪಡಬೇಕಾಯಿತು.
ಗಂಗೊಳ್ಳಿ ಪೊಲೀಸರು, ಕುಂದಾಪುರ ಅಗ್ನಿಶಾಮಕ ದಳ, ಗಂಗೊಳ್ಳಿಯ ದಿನೇಶ್ ಖಾರ್ವಿ ತಂಡ, ಟೀಮ್ ಹೆಚ್ಐ ತುರ್ತು ಸ್ಪಂದನಾ ತಂಡ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದರು. ಈ ವೇಳೆ ದಿನೇಶ್ ಖಾರ್ವಿ ಅವರು ಕಾರ್ಯಾಚರಣೆ ನಡೆಸಿ ಇಬ್ಬರು ಬಾಲಕಿಯರ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದರು.
ಬಳಿಕ ಮೃತದೇಹಗಳನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದ ಶೀತಲೀಕರಣ ಘಟಕಕ್ಕೆ ರವಾನಿಸಲಾಯಿತು. ಇಬ್ಬರು ವಿದ್ಯಾರ್ಥಿನಿಯರ ಅಕಾಲಿಕ ಸಾವಿನಿಂದ ಕುಟುಂಬಸ್ಥರ, ಹೆತ್ತವರ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ಘಟನೆಯ ಕುರಿತು ಗಂಗೊಳ್ಳಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.