ಡೈಲಿವಾರ್ತೆ: 23/ಜು./2026

ಸುಳ್ಯ: ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಹೊಸ ತಿರುವು; ಮಾವ, ಅತ್ತೆ, ನಾದಿನಿ ಬಂಧನ

ಸುಳ್ಯ: ಸಂಪಾಜೆ ಗ್ರಾಮದ ಕಡೆಪಾಲದಲ್ಲಿ 22 ವರ್ಷದ ವಿವಾಹಿತೆ ಫಾತೀಮಾ ನಿಶಾನ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತೆಯ ಪತಿಯ ಮನೆಯ ಮೂವರನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.100/2026ರಡಿ ಬಿಎನ್‌ಎಸ್–2023ರ ಕಲಂ 85, 103(1) ಹಾಗೂ 3(5) ಅನ್ವಯ ದಾಖಲಾಗಿರುವ ಪ್ರಕರಣದ ತನಿಖೆಯ ವೇಳೆ, ಮೃತೆಯ ಪತಿಯ ಮನೆಯವರ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತೆಯ ಮಾವ ಸಿ.ಪಿ. ಅಳವಿ (54), ಅತ್ತೆ ಅಯಿಷಾ ಸಿ.ಎ. ಹಾಗೂ ನಾದಿನಿ ಫಸಿಲಾ ಸಿ.ಎ. (29) ಅವರನ್ನು ಜುಲೈ 22ರಂದು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 18ರಂದು ರಾತ್ರಿ ಸಂಭವಿಸಿದ ಈ ಘಟನೆ ಜಿಲ್ಲೆಯಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ನಾಲ್ಕು ವರ್ಷಗಳ ಹಿಂದೆ ಕಡೆಪಾಲದ ಅನ್ಸಾರ್ ಅವರೊಂದಿಗೆ ವಿವಾಹವಾಗಿದ್ದ ಫಾತೀಮಾ ನಿಶಾನ ಅವರಿಗೆ ಎರಡೂವರೆ ವರ್ಷದ ಮಗುವಿದೆ.
ಮೃತ್ಯುವಿಗೆ ಕೆಲವೇ ಕ್ಷಣಗಳ ಮೊದಲು ನಿಶಾನ ಅವರು ತಮ್ಮ ತಾಯಿ ಜುಬೇದ ಅವರಿಗೆ ಕರೆ ಮಾಡಿ, ಪತಿಯ ಮನೆಯವರಿಂದ ಕಿರುಕುಳವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದರಿಂದ ಆತಂಕಗೊಂಡ ತಾಯಿ ತಕ್ಷಣ ಮಗಳ ಮನೆಗೆ ಧಾವಿಸಿದಾಗ, ನಿಶಾನ ಮೃತಪಟ್ಟಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ.
ನಿಶಾನ ಅವರು ಸ್ನಾನಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿಯ ಮನೆಯವರು ಹೇಳಿದ್ದರೂ, ತಾಯಿ ಸ್ಥಳಕ್ಕೆ ತಲುಪುವಷ್ಟರಲ್ಲಿ ಮೃತದೇಹವನ್ನು ಸ್ನಾನಗೃಹದಿಂದ ಹೊರಗೆ ತಂದು ಮಲಗಿಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಈ ಬೆಳವಣಿಗೆ ಪ್ರಕರಣದ ಬಗ್ಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೃತೆಯ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಪೂರ್ವಯೋಜಿತ ಕೊಲೆ ಎಂದು ಆರೋಪಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ನಡುವೆ ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಬಂಧಿತರಿಂದ ವಿಚಾರಣೆ ಮುಂದುವರಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.