ಡೈಲಿವಾರ್ತೆ:25/ಅ./2026

ಸಿದ್ದರಾಮಯ್ಯ ಸ್ಟಿಂಗ್ ವಿಡಿಯೋ ಪ್ರಕರಣಕ್ಕೆ ಹೊಸ ತಿರುವು: ದೆಹಲಿ ಮೂಲದ ಯುವಕನ ಬಂಧನ, ಷರತ್ತುಬದ್ಧ ಜಾಮೀನು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ದೆಹಲಿ ಮೂಲದ ರಿತೇಶ್ ಪಾಂಡೆ (23) ಎಂಬ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಆರೋಪಿ ಬಿಡುಗಡೆಯಾಗಿದ್ದಾನೆ.

‘ಕರ್ನಾಟಕ ಹನಿಟ್ರ್ಯಾಪ್’ ಹೆಸರಿನ ಯೂಟ್ಯೂಬ್ ಚಾನಲ್ ಮೂಲಕ ವಿಡಿಯೋ ಅಪ್‌ಲೋಡ್ ಮಾಡಿರುವ ಆರೋಪ ರಿತೇಶ್ ಮೇಲಿದೆ. ಅಪರಿಚಿತ ವ್ಯಕ್ತಿಯೊಬ್ಬರು ಸುಮಾರು ನಾಲ್ಕು ತಿಂಗಳ ಹಿಂದೆ ತನ್ನನ್ನು ಸಂಪರ್ಕಿಸಿ, ವಿಡಿಯೋ ಅಪ್‌ಲೋಡ್ ಮಾಡಲು ಹಣದ ಆಮಿಷವೊಡ್ಡಿದ್ದರು ಎಂದು ಆರೋಪಿ ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಕೆಲಸಕ್ಕಾಗಿ ರೂ.80,000ಕ್ಕೂ ಅಧಿಕ ಹಣ ಪಡೆದಿರುವುದಾಗಿ ಆತ ಹೇಳಿದ್ದಾನೆ ಎನ್ನಲಾಗಿದೆ.

ವಿಡಿಯೋ ಇದ್ದ ಪೆನ್‌ಡ್ರೈವ್ ಅನ್ನು ಅಪರಿಚಿತ ವ್ಯಕ್ತಿಯೊಬ್ಬರು ನೀಡಿದ್ದರು ಎಂದು ಆರೋಪಿ ತಿಳಿಸಿದ್ದು, ಅದರ ಹಿಂದಿರುವ ವ್ಯಕ್ತಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ವಿಡಿಯೋ ಅಪ್‌ಲೋಡ್ ಮಾಡಲು ಬಳಸಿದ ಮೊಬೈಲ್‌ಗಳ ಖರೀದಿ ದಾಖಲೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಬಂಧಿತನನ್ನು ಬೆಂಗಳೂರಿನ 66ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ತನಿಖೆಗೆ ಸಹಕರಿಸುವುದು, ನಗರ ಬಿಟ್ಟು ತೆರಳುವಾಗ ಪೊಲೀಸರಿಗೆ ಮಾಹಿತಿ ನೀಡುವುದು ಹಾಗೂ ವಿಚಾರಣೆಗೆ ಹಾಜರಾಗುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ನೀಡಿದೆ. ಪ್ರಕರಣದ ಹಿಂದಿರುವ ವ್ಯಕ್ತಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಸಂತ್ರಸ್ತೆಯ ಹೇಳಿಕೆಯನ್ನೂ ಸಿಸಿಬಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.