


ಡೈಲಿವಾರ್ತೆ:22/ಆಗಸ್ಟ್ /2026

ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ಸದ್ಭಾವನಾ ದಿನ ಆಚರಣೆ ಹಾಗೂ ಪ್ರತಿಜ್ಞಾ ಸ್ವೀಕಾರ

ಬಂಟ್ವಾಳ : ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ,ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಸಾಮರಸ್ಯ ವನ್ನು ಕಾಪಾಡುವ ಉದ್ದೇಶ ದಿಂದ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ “ಸದ್ಭಾವನಾ ದಿನ”ವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಉಪ ಪ್ರಾಂಶುಪಾಲರಾದ ಅಂಜಲಿನ ಸುನಿತಾ ಪಿರೇರ ಮಾತನಾಡಿ, “ವಿಭಿನ್ನ ಜಾತಿ, ಧರ್ಮ, ಭಾಷೆಗಳ ನಡುವೆ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಬೆಳೆಸುವುದೇ ಸದ್ಭಾವನೆಯ ನಿಜವಾದ ಅರ್ಥ. ಯುವಕ -ಯುವತಿಯರೇ ದೇಶದ ಭವಿಷ್ಯ. ನೀವು ಸದ್ಭಾವನೆಯ ಸಂದೇಶವನ್ನು ಮನೆ-ಮನೆಗೆ ತಲುಪಿಸಬೇಕು” ಎಂದು ಕರೆ ನೀಡಿದರು.
ಎಲ್ಲಾ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಸದ್ಭಾವನಾ ಪ್ರತಿಜ್ಞೆಯನ್ನು ಸಾಮೂಹಿಕವಾಗಿ ಸ್ವೀಕರಿಸಿದರು.
ಸದ್ಭಾವನಾ ಪ್ರತಿಜ್ಞೆ:
ನಾನು ದೇಶದ ಜನರ ಭಾವನಾತ್ಮಕ ಏಕತೆ ಮತ್ತು ಸಮಗ್ರತೆಗಾಗಿ ಹಾಗೂ ಜಾತಿ, ಪ್ರಾದೇಶಿಕತೆ, ಭಾಷೆ ಮತ್ತು ಧರ್ಮಗಳನ್ನು ಮೀರಿ ಕೆಲಸ ಮಾಡಲು ನನ್ನ ಹೃದಯಪೂರ್ವಕ ಕೊಡುಗೆ ನೀಡುತ್ತೇನೆ ಮತ್ತು ಎಲ್ಲಾ ಭಾರತೀಯರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಶ್ರಮಿಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ.
ಉಪನ್ಯಾಸಕಿ ಅಶ್ವಿತಾ ಕುಮಾರಿ ಪ್ರತಿಜ್ಞೆ ಬೋಧಿಸಿದರು. ಗಾಯತ್ರಿ ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.